ಬೆಂಗಳೂರು: ಬಿಜೆಪಿಯವರು ಯಾರನ್ನು ಸಂಪರ್ಕ ಮಾಡಿದ್ದಾರೆ. ಯಾವೆಲ್ಲಾ ಆಮಿಷಗಳನ್ನು ನೀಡಿದ್ದಾರೆ ಎಂಬ ಎಲ್ಲ ಮಾಹಿತಿಗಳು ನನ್ನ ಬಳಿ ಇವೆ ಎಂದು ಹೇಳುವ ಮೂಲಕ ಆಪರೇಷನ್ ಕಮಲ ನಡೆಯುತ್ತಿದೆ ಎಂಬುದನ್ನು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಖಚಿತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕೆಂದು ಬಿಜೆಪಿಯವರು ದೆಹಲಿಯಲ್ಲಿ ಸಭೆ ಮಾಡುತ್ತಿದ್ದಾರೆ. ಈ ಸಭೆಯಿಂದಾಗಿ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಆದರೆ ಬಿಜೆಪಿಯ ಆಮಿಷಗಳನ್ನು ನಂಬಿ ಕಾಂಗ್ರೆಸ್ ಅಥವಾ ಜೆಡಿಎಸ್ ಯಾವ ಶಾಸಕರು ಕಮಲ ಹಿಡಿಯಲು ಮುಂದಾಗಲ್ಲ. ಬಿಜೆಪಿಯನ್ನು ನಂಬಿ ಪಕ್ಷ ಬಿಡುವ ಸನ್ನಿವೇಶ ರಾಜ್ಯದಲ್ಲಿ ಇಲ್ಲ ಅಂತಾ ತಿಳಿಸಿದರು.
ಮುಂಬೈನಲ್ಲಿರುವ ಮೂವರು ಶಾಸಕರು ನನ್ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಹೋದವರೆಲ್ಲ ನನ್ನ ಮಿತ್ರರು ಎಂದ ಹೇಳಿ ಶಾಸಕರ ಹೆಸರನ್ನು ಬಹಿರಂಗಪಡಿಸಲಿಲ್ಲ. ಮುಂಬೈಗೆ ತೆರಳುವ ಮುನ್ನವೇ ನನ್ನ ಜೊತೆ ಚರ್ಚಿಸಿ ವೈಯಕ್ತಿಕ ಕೆಲಸಕ್ಕಾಗಿ ತೆರಳಿದ್ದಾರೆ. ದೆಹಲಿಯಲ್ಲಿರುವ ಶಾಸಕರು ನನ್ನ ಸ್ನೇಹಿತರು, ಎಲ್ಲರು ನನ್ನವರು. ಸರ್ಕಾರಕ್ಕೆ ಯಾವುದೇ ಧಕ್ಕೆಯಿಲ್ಲದ್ದರಿಂದ ನಾನು ಆರಾಮಾಗಿಯೇ ಇದ್ದೇನೆ ಎಂದು ತಿಳಿಸಿದರು.
ಈ ತಿಂಗಳ ಅಂತ್ಯದೊಳಗೆ 8 ಲಕ್ಷ ರೈತರ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ಆಗಲಿದೆ. ಬಿಜೆಪಿಯ ಯಾವ ನಾಯಕರು ರೈತರ ಬಗ್ಗೆ ಆತಂಕದ ಕನಿಕರ ತೋರಿಸುವ ಅಗತ್ಯವಿಲ್ಲ. ಮೈತ್ರಿ ಸರ್ಕಾರದಲ್ಲಿ ರೈತರನ್ನು ಉಳಿಸಲು ಸಾಲಮನ್ನಾ ಮಾಡಲಾಗಿದೆಯೇ ಹೊರತು ಬಿಜೆಪಿ ಮತ್ತು ಪ್ರಧಾನಿಗಳನ್ನು ಮೆಚ್ಚಿಸಲು ಮಾಡುತ್ತಿಲ್ಲ. ರೈತ ಪರವಾದ ಬೇರೆ ರೀತಿಯ ಯೋಜನೆಗಳನ್ನು ಜಾರಿ ತರಲು ತೀರ್ಮಾನ ಮಾಡಲಾಗುತ್ತಿದೆ. ರೈತರಿಗೆ ಕೊಟ್ಟ ಮಾತಿನಂತೆ ಸಾಲಮನ್ನಾ ಮಾಡಲಾಗುವುದು ಎಂದು ಸಿಎಂ ಹೇಳಿದರು.