ಬೆಂಗಳೂರು,ಮಾ.12- ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸಿದ್ಧಪಡಿಸಿರುವ ವಿಶೇಷ ತಂಡ ರಾಜ್ಯಾದ್ಯಂತ ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭಿಸಿದೆ.
ದೇಶದ ವಿವಿಧ ಭಾಗದ ನಾಯಕರನ್ನು ಒಳಗೊಂಡ ಈ ತಂಡ ರಾಜ್ಯದ ಎಲ್ಲಾ 224 ವಿಧಾನಸಭೆ ಕ್ಷೇತ್ರಗಳನ್ನು ಸುತ್ತಿ, ಚುನಾವಣೆ ಸಂಬಂಧ ಅಗತ್ಯವಿರುವ ಮಾಹಿತಿ ಸಂಗ್ರಹಿಸಲಿದೆ. 55 ಜನರ ತಂಡ ಎರಡು ದಿನ ರಾಜ್ಯಾದ್ಯಂತ ಸಂಚರಿಸಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಚುನಾವಣೆ ಸಂಬಂಧ ರಾಜ್ಯದ ಉದ್ದಗಲಕ್ಕೂ ಕೇಂದ್ರದಿಂದ ಆಗಮಿಸಿರುವ ನಾಯಕರ ದಂಡು ಸಂಚರಿಸಲಿದ್ದು, ಮಾ.10ರಿಂದ ಆರಂಭವಾಗಿರುವ ಈ ಸಂಚಾರ ಇಂದು ಕೂಡಾ ಮುಂದುವರಿದಿದೆ. ರಾಜ್ಯದ ವಿವಿಧ ಭಾಗದಲ್ಲಿ ತಂಗಿ ಅಲ್ಲಿನ ಸ್ಥಿತಿಗತಿ, ಅಭ್ಯರ್ಥಿಯ ಮಾಹಿತಿ, ಪ್ರತಿಪಕ್ಷಗಳ ತಂತ್ರಗಾರಿಕೆಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಕೇಂದ್ರದಿಂದ ಆಗಮಿಸುವ ಪ್ರತಿಯೊಬ್ಬ ನಾಯಕನಿಗೆ ತಲಾ ನಾಲ್ಕು ವಿಧಾನಸಭೆ ಕ್ಷೇತ್ರ ಹಂಚಿಕೆ ಮಾಡಲಾಗಿದೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಈಗಾಗಲೇ ಎರಡು ಪ್ರತ್ಯೇಕ ಸರ್ವೆ ಮಾಡಿಸಿರುವ ಅಮಿತ್ ಷಾ ಅದರ ವರದಿಯನ್ನು ತಮ್ಮ ಕೈಲಿರಿಸಿಕೊಂಡಿದ್ದಾರೆ. ಇನ್ನು ಈ ಸರ್ವೆ ವರದಿಯಂತೆ ಬಿಜೆಪಿಯ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿಗಳ ಸ್ಥಿತಿಗತಿಯ ವಿವರ ಲಭಿಸಿದೆ. ಕ್ಷೇತ್ರದ ಚುನಾವಣೆ ಸಿದ್ಧತೆಯ ಪರಿಶೀಲನೆಯೂ ಈಗ ನಡೆಯುವ ಸಂಚಾರದ ವೇಳೆ ಕೇಂದ್ರ ನಾಯಕರು ಸಂಗ್ರಹಿಸಲಿದ್ದಾರೆ. ಬೂತ್ ಮಟ್ಟದಿಂದ ಹಿಡಿದು ಕ್ಷೇತ್ರದ ಎಲ್ಲಾ ಸ್ಥರದ ಕಮಲ ನಾಯಕರ ಜತೆ ಸಭೆ ನಡೆಸಿ ಮಾಹಿತಿ ಪಡೆಯಲಿದ್ದಾರೆ.
ಟಿಕೆಟ್ ಆಕಾಂಕ್ಷಿಗಳ ಸಾಮರ್ಥ್ಯ ಕ್ಷೇತ್ರದಲ್ಲಿ ಪಕ್ಷದ ಸ್ಥಿತಿಗತಿಯ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯ ಆಗಲಿದೆ. ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಿಗೆ ಹಾಗೂ ಪಕ್ಷದ ನಾಯಕರಿಗೆ ಅಮಿತ್ ಷಾ ಈ ಹಿಂದೆ ನೀಡಿದ್ದ ಟಾಸ್ಕ್ಗಳು ಪೂರ್ಣಗೊಂಡಿದೆಯಾ? ಇತರೆ ಪಕ್ಷಗಳ ಬಲ ಎಷ್ಟಿದೆ? ಅವರ ಕಾರ್ಯತಂತ್ರಗಳು ಏನು? ಚುನಾವಣೆಗೆ ಕ್ಷೇತ್ರದ ಬೂತ್ ಸಶಕ್ತೀಕರಣದ ಪರಿಶೀಲನೆಯನ್ನು ವಿಶೇಷ ತಂಡ ಮಾಡಲಿದೆ.
ಯಾರ್ಯಾರು ತಂಡದಲ್ಲಿದ್ದಾರೆ?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಿದ್ಧಪಡಿಸಿ ಕಳಿಸಿರುವ ತಂಡದ ಸದಸ್ಯರು ಅದಾಗಲೇ ಒಂದು ದಿನದ ಪರಿಶೀಲನಾ ಕಾರ್ಯ ಪೂರ್ಣಗೊಳಿಸಿದ್ದು, ಇಂದು ಮತ್ತೊಮ್ಮೆ ಸಂಚರಿಸಿ ಮಾಹಿತಿ ಸಂಗ್ರಹಿಸಿ ಅಂತಿಮ ವಿವರವನ್ನು ಷಾಗೆ ಸಲ್ಲಿಸಲಿದ್ದಾರೆ.
ಪಟ್ಟಿಯಲ್ಲಿರುವ ಪ್ರಮುಖರು ಹಾಗೂ ಅವರಿಗೆ ವಹಿಸಿದ ವಿಧಾನಸಭೆ ಕ್ಷೇತ್ರ ವಿವರ ಹೀಗಿದೆ.
ಧರ್ಮೆಂದ್ರ ಪ್ರಧಾನ್-ಬೆಳ್ತಂಗಡಿ, ಮುರಳೀಧರ ರಾವ್- ಶಿವಮೊಗ್ಗ ಗ್ರಾಮೀಣ, ಅನುರಾಗ್ ಸಿಂಘ್ ಠಾಕೂರ್- ರಾಯಚೂರು, ಬಂಡಾರು ದತ್ತಾತ್ರೇಯ- ಸಿಂಧನೂರು, ಕೈಲಾಶ್ ವಿಜಯವರ್ಗೀಯ- ಗಂಗಾವತಿ, ರಾಜವರ್ಧನ್ ಸಿಂಗ್ ರಾಠೋಡ್- ಕೆ.ಆರ್.ಪುರ, ರಾಜೀವ್ ಪ್ರತಾಪ್- ಮಹಾಲಕ್ಷ್ಮಿಲೇಔಟ್, ನರೇಂದ್ರ ಸಿಂಗ್ ತೋಮರ್- ಜಗಳೂರು, ಜೆ.ಪಿ. ನಡ್ಡಾ- ಕುಣಿಗಲ್, ಭೂಪೇಂದ್ರ ಯಾದವ್- ಪದ್ಮನಾಭನಗರ, ತಾವರ್ ಚಂದ್ ಗೆಹ್ಲೋಟ್- ಕೆಜಿಎಫ್, ಡಾ. ಸತ್ಯಪಾಲ್ ಸಿಂಗ್- ದಾವಣಗೆರೆ, ಡಾ. ಮಹೇಶ್ ಶರ್ಮಾ- ಹುಬ್ಬಳ್ಳಿ ಧಾರವಾಡ ಸೆಂಟ್ರಲ್, ಅರುಣ್ ಸಿಂಗ್- ಮುದ್ದೇಬಿಹಾಳ, ವಿನೋದ್ ಸೋನ್ಕರ್- ಹಡಗಲಿ ವಿಧಾನಸಭೆ ಕ್ಷೇತ್ರಗಳಿಗೆ ನಿಯೋಜಿತರಾಗಿದ್ದಾರೆ. ಉಳಿದ ನಾಯಕರು ಇತರೆ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ.
ಅವರ ಒಲವು ಯಾರ ಮೇಲೆ ಇದೆಯೋ ಅವರಿಗೆ ಟಿಕೆಟ್ ಅನ್ನುವ ಮಾನದಂಡವನ್ನು ಈ ಸಮಿತಿ ತನ್ನ ಮಾಹಿತಿ ಸಂಗ್ರಹ ಸಂದರ್ಭಕ್ಕೆ ಅಳವಡಿಸಿಕೊಂಡಿದ್ದು, ರಾಜ್ಯ ನಾಯಕರು ಮಾತ್ರ ಕೇಂದ್ರ ನೀಡುವ ಮಾರ್ಗದರ್ಶನ ಆಧರಿಸಿ ಮುನ್ನಡೆಯಬೇಕಾಗಿದೆ.