ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಹಲವು ವದಂತಿಗಳು ಹರಡುತ್ತಿದ್ದು, ಬಿಜೆಪಿಯ ನಡೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಆತಂಕ ಎದುರಾಗಿತ್ತು. ಇದೆಲ್ಲದರ ಕುರಿತು ಚರ್ಚಿಸಲು ಇಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕಾಂಗ್ರೆಸ್ ಸಚಿವರನ್ನು ಉಪಾಹಾರ ಕೂಟಕ್ಕೆ ಆಹ್ವಾನಿಸಿದ್ದಾರೆ.
ಅಶೋಕ ಹೋಟೆಲ್ನಲ್ಲಿ ಉಪಾಹಾರ ಸಭೆ ನಡೆಯಲಿದ್ದು, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಪುಟ್ಟರಂಗ ಶೆಟ್ಟಿ, ಇ. ತುಕಾರಾಂ, ಪ್ರಿಯಾಂಕ್ ಖರ್ಗೆ, ಪರಮೇಶ್ವರ ನಾಯ್ಕ್ ಸೇರಿದಂತೆ ಹಲವು ನಾಯಕರು ಆಗಮಿಸಿದ್ದಾರೆ. ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಗಮನಿಸುತ್ತಿದ್ದರೆ ಆಪರೇಷನ್ ಕಮಲಕ್ಕೆ ಸಿದ್ಧಗೊಂಡಿರುವ ಅನುಮಾನಗಳು ಕಾಡುತ್ತಿದೆ. ಹೀಗಾಗಿ, ಆಪರೇಷನ್ ಕಮಲಕ್ಕೆ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಆ ಬಗ್ಗೆ ಇಂದಿನ ಉಪಾಹಾರ ಸಭೆಯಲ್ಲಿ ಚರ್ಚೆಯಾಗಲಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ನ ಅತೃಪ್ತ ಶಾಸಕರ ಉಸ್ತುವಾರಿಯನ್ನು ಸಚಿವರಿಗೆ ವಹಿಸಲು ಡಿಸಿಎಂ ನಿರ್ಧರಿಸಿದ್ದು, ಆಪರೇಷನ್ ಕಮಲಕ್ಕೆ ಒಳಗಾಗದಂತೆ ತಡೆಯುವ ಜವಾಬ್ದಾರಿ ವಹಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಯಾ ಜಿಲ್ಲೆಯ ಶಾಸಕರ ಹೊಣೆ ವಹಿಸುವ ಸಾಧ್ಯತೆಯಿದೆ. ಉಪಾಹಾರದ ನೆಪದಲ್ಲಿ ಈ ಬಗ್ಗೆ ಕಾಂಗ್ರೆಸ್ ಸಚಿವರೊಂದಿಗೆ ಚರ್ಚೆ ನಡೆಸಿ, ಮುಂದಿನ ಕಾರ್ಯತಂತ್ರ ರೂಪಿಸಲಿದ್ದಾರೆ ಎನ್ನಲಾಗಿದೆ.
ಇನ್ನು, ಸಂಕ್ರಾಂತಿ ವೇಳೆಗೆ ಹೊಸ ಕ್ರಾಂತಿಯಾಗಲಿದೆ ಎಂಬ ಬಿಜೆಪಿ ಹೇಳಿಕೆಯಿಂದ ಚಡಪಡಿಕೆಗೆ ಒಳಗಾಗಿದ್ದ ಕಾಂಗ್ರೆಸ್ ನಾಯಕರು ಆ ರೀತಿಯ ಯಾವುದೇ ಬೆಳವಣಿಗೆಗಳು ಆಗದಿರುವುದರಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಬಿಜೆಪಿ ಕಡೆಗೆ ವಾಲುವ ಸಾಧ್ಯತೆಯಿದ್ದ ಅತೃಪ್ತ ಶಾಸಕರ ಮೇಲೆ ನಿಗಾ ಇಟ್ಟಿದ್ದ ಕಾಂಗ್ರೆಸ್ ನಾಯಕರು ಇದೀಗ ಸ್ವಲ್ಪ ನಿರಾಳವಾಗಿದ್ದಾರೆ.