ಬೆಂಗಳೂರು, ಜ.13-ನಾವ್ಯಾರು ಪಕ್ಷ ಬಿಟ್ಟು ಹೋಗುವುದಿಲ್ಲ. ಅನಗತ್ಯವಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿರುವುದಕ್ಕೆ ನಾವು ಹೊಣೆಯಲ್ಲ ಎಂದು ಕಾಂಗ್ರೆಸ್ ಶಾಸಕರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರಿಗೆ ಸ್ಪಷ್ಟಪಡಿಸಿದ್ದಾರೆ.
ಕೆಲವರು ಖುದ್ದು ಭೇಟಿ ಮಾಡಿ ಅವರಿಗೆ ಈ ವಿಷಯ ತಿಳಿಸಿದರೆ, ಮತ್ತೆ ಕೆಲವರು ದೂರವಾಣಿ ಮೂಲಕ ಸಿದ್ದರಾಮಯ್ಯನವರಿಗೆ ಸ್ಪಷ್ಟನೆ ನೀಡಿದ್ದಾರೆ. ಶಾಸಕರಾದ ರಮೇಶ್ ಜಾರಕಿ ಹೊಳಿ, ನಾಗೇಂದ್ರ, ಆನಂದ್ಸಿಂಗ್ ಅವರನ್ನು ಹೊರತುಪಡಿಸಿದರೆ 76 ಶಾಸಕರು ಸಿದ್ದರಾಮಯ್ಯನವರ ಸಂಪರ್ಕದಲ್ಲಿದ್ದು, ನಾವು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಜೆಡಿಎಸ್ ಸಚಿವರು ನಮ್ಮನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಾರೆ.ಅಲ್ಲದೆ, ಕ್ಷೇತ್ರದ ಅನುದಾನವಿಲ್ಲದೆ ಅಭಿವೃದ್ಧಿ ಕೆಲಸಗಳಿಗೆ ಅಡಚಣೆಯಾಗಿದೆ.ಮುಂಬರುವ ಲೋಕಸಭಾ ಚುನಾವಣೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಿಸಬೇಕು.ಶಾಸಕರ ಹಿರಿತನವನ್ನು ಆಧರಿಸಿ ಸರ್ಕಾರದಲ್ಲಾಗಲಿ, ಪಕ್ಷದಲ್ಲಾಗಲಿ ಸೂಕ್ತ ಸ್ಥಾನಮಾನ ಕೊಡಿಸಬೇಕೆಂದು ಶಾಸಕರು ಒತ್ತಾಯ ಮಾಡಿದ್ದಾರೆ.
ನಮ್ಮ ಪಕ್ಷದ ಮುಖಂಡರು ಶಾಸಕರಾಗಿದ್ದಾರೆ.ನಮ್ಮ ಕ್ಷೇತ್ರಕ್ಕೆ ಸಾಕಷ್ಟು ಕೆಲಸಗಳನ್ನು ಮಾಡಿಸಿಕೊಳ್ಳಬಹುದೆಂದು ಕಾರ್ಯಕರ್ತರ ಭಾವನೆ ಇರುತ್ತದೆ. ಕಾರ್ಯಕರ್ತರ ಭಾವನೆಯನ್ನು ದಯಮಾಡಿ ಅರ್ಥಮಾಡಿಕೊಳ್ಳಬೇಕು.ಅವರಲ್ಲಿ ಅನಾಥ ಪ್ರಜ್ಞೆ ಮೂಡುವಂತಾಗಬಾರದು ಎಂದು ಹಲವು ಶಾಸಕರು ಸಿದ್ದರಾಮಯ್ಯನವರಿಗೆ ತಿಳಿಸಿದ್ದಾರೆ.