ನ್ಯಾಷನಲ್ ಕಾಲೇಜು ಹತ್ತಿರವಿರುವ ಖಾಲಿ ಜಾಗವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಮಂಜೂರು ಮಾಡಿ : ಪ್ರೊ.ಚಂದ್ರಶೇಖರ ಪಾಟೀಲ್

ಬೆಂಗಳೂರು, ಜ.13-ನ್ಯಾಷನಲ್ ಕಾಲೇಜು ಆಟದ ಮೈದಾನಕ್ಕೆ ಹೊಂದಿಕೊಂಡಂತಿರುವ ಖಾಲಿ ಜಾಗವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ಗೆ ಮಂಜೂರು ಮಾಡಬೇಕೆಂದು ಕನ್ನಡಪರ ಚಿಂತಕ ಪ್ರೊ.ಚಂದ್ರಶೇಖರ ಪಾಟೀಲ್ ಒತ್ತಾಯಿಸಿದರು.

ನ್ಯಾಷನಲ್ ಕಾಲೇಜು ಆಟದ ಮೈದಾನಕ್ಕೆ ಹೊಂದಿಕೊಂಡಂತಿರುವ ಮೆಟ್ರೋ ನಿಲ್ದಾಣ ಬಳಿಯ ಖಾಲಿ ನಿವೇಶನವನ್ನು ಜಿಲ್ಲಾ ಕಸಾಪಗೆ ಕನ್ನಡ ಭವನ ನಿರ್ಮಿಸಲು ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ಗೆ ನಿವೇಶನ ಪಡೆದು ಕನ್ನಡ ಭವನ ನಿರ್ಮಿಸಲು ನಿರ್ಧರಿಸಿದ್ದು, ಕಳೆದ ಎರಡು ಮೂರು ವರ್ಷಗಳಿಂದ ಬಿಬಿಎಂಪಿಗೆ ಒತ್ತಾಯಿಸುತ್ತಲೇ ಬಂದಿದ್ದೇವೆ. ಪಾಲಿಕೆ ಆಯುಕ್ತರು, ಮಹಾಪೌರರಿಗೆ ನಿವೇಶನ ಮಂಜೂರು ಮಾಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಸಂಸದ ಪಿ.ಸಿ.ಮೋಹನ್, ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತ್‍ಕುಮಾರ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ವಿ.ಸೋಮಣ್ಣ, ಶಾಸಕ ಗರುಡಾಚಾರ್ ಸೇರಿದಂತೆ ಮತ್ತಿತರ ಕನ್ನಡ ಪರ ಚಿಂತಕರು ಶಿಫಾರಸು ಪತ್ರಗಳನ್ನು ನೀಡಿ ಬೆಂಬಲಿಸಿದ್ದಾರೆ. ಆದರೆ ಕೆಲವರ ಕುತಂತ್ರದಿಂದ ಇದುವರೆಗೂ ನಿವೇಶನ ಮಂಜೂರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೂಡಲೇ ನ್ಯಾಷನಲ್ ಕಾಲೇಜು ಆಟದ ಮೈದಾನಕ್ಕೆ ಹೊಂದಿಕೊಂಡಿರುವಂತೆ ಮೆಟ್ರೋ ನಿಲ್ದಾಣದ ಬಳಿ ಇರುವ ಖಾಲಿ ಜಾಗವನ್ನು ಬೆಂಗಳೂರು ನಗರ ಜಿಲ್ಲಾ ಕಸಾಪಗೆ ಮಂಜೂರು ಮಾಡಲು ಕ್ರಮಕೈಗೊಳ್ಳಬೇಕು ಎಂದು ಬಿಬಿಎಂಪಿಯನ್ನು ಚಂದ್ರಶೇಖರ ಪಾಟೀಲ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕನ್ನಡ ಹಿರಿಯ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ, ಡಾ.ಭೆರಮಂಗಲ ರಾಮೇಗೌಡ, ಜಗದೀಶ್‍ರೆಡ್ಡಿ, ಕನ್ನಡ ಹಿರಿಯ ಹೋರಾಟಗಾರ್ತಿ ಡಾ.ರಮಾದೇವಿ ವಿಶ್ವೇಶ್ವರಯ್ಯ, ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ, ಗೌರವಾಧ್ಯಕ್ಷ ಎಂ.ತಿಮ್ಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ