ಶಿಕ್ಷಣದ ಸೌಲಭ್ಯದಲ್ಲಿ ಸಾಕಷ್ಟು ತಾರತಮ್ಯವಿದೆ ಲೋಕಾಯುಕ್ತ ಟಿ.ವಿಶ್ವನಾಥಶೆಟ್ಟಿ

ಬೆಂಗಳೂರು, ಜ.13-ಸಾಮಾನ್ಯ ಮಕ್ಕಳು ಮತ್ತು ಕೊಳಚೆ ಪ್ರದೇಶದ ಮಕ್ಕಳ ನಡುವಿನ ಶಿಕ್ಷಣ ಸೌಲಭ್ಯದ ತಾರತಮ್ಯ ಹೋಗಬೇಕೆಂದು ಲೋಕಾಯುಕ್ತ ಟಿ.ವಿಶ್ವನಾಥಶೆಟ್ಟಿ ಕರೆ ನೀಡಿದರು.

ಕಬೀರ್ ಟ್ರಸ್ಟ್ ವತಿಯಿಂದ ನಗರದ ತರಳಬಾಳು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜ್ಞಾನ ಯಜ್ಞ-100 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಸೌಲಭ್ಯದಲ್ಲಿ ಸಾಕಷ್ಟು ತಾರತಮ್ಯ ಇದೆ. ಈ ರೀತಿಯ ತಾರತಮ್ಯ ಹೋಗಲಾಡಿಸಿ ಎಲ್ಲರಿಗೂ ಸಮಾನ ಸೌಲಭ್ಯದ ಶಿಕ್ಷಣ ಸಿಗುವಂತೆ ಮಾಡಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಅವಕಾಶ ಸಿಕ್ಕರೆ ಬಡವನ ಮಗನೂ ಕೂಡ ಪ್ರಧಾನಿಯಾಗಬಲ್ಲ. ಮುಖ್ಯಮಂತ್ರಿ, ಸಚಿವ, ಶಾಸಕ, ನ್ಯಾಯಾಲಯಗಳ ನ್ಯಾಯಾಧೀಶರು ಸೇರಿದಂತೆ ಯಾವುದೇ ಉನ್ನತ ಹುದ್ದೆಯನ್ನಾದರೂ ಏರಬಲ್ಲ. ಯಾವುದೇ ಮಗು ವಿದ್ಯೆಯಿಂದ ವಂಚಿತವಾಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಸೂಕ್ತ ಅವಕಾಶಗಳು ಮತ್ತು ಸೌಲಭ್ಯಗಳು ಸಿಕ್ಕಾಗ ಎಲ್ಲ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪ್ರತಿಭೆ ಎಂಬುದು ಜಾತಿ ಆಧರಿಸಿರುವುದಿಲ್ಲ. ನಾನು ಲೋಕಾಯುಕ್ತನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡಿದ್ದೇನೆ. ಹೋದ ಕಡೆಯಲೆಲ್ಲ ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚೆ ಮಾಡಿ ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸಿದ್ದೇನೆ. ಅದರ ಜೊತೆಯಲ್ಲೇ ಆಯಾ ಜಿಲ್ಲೆಗಳಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಮೊರಾರ್ಜಿ ವಸತಿ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ವಿದ್ಯಾರ್ಥಿಗಳ ಫಲಿತಾಂಶ ಸಾಮಾನ್ಯವರ್ಗದ ವಿದ್ಯಾರ್ಥಿಗಳಿಗಿಂತಲೂ ಉತ್ತಮವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಅದನ್ನು ನೋಡಿದಾಗ ನನಗೆ ಪ್ರತಿಭೆ ಎಂಬುದು ಹುಟ್ಟಿನ ಜಾತಿಯಿಂದ ಬರುವುದಿಲ್ಲ ಎಂಬುದು ತಿಳಿದುಬಂತು ಎಂದು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಸಾಧನೆಗಾಗಿ ನಿರಂತರ ಶ್ರಮ ವಹಿಸಬೇಕು.ಶ್ರದ್ಧೆಯಿಂದ ವ್ಯಾಸಂಗ ಮಾಡಬೇಕು.ನಿಗದಿತ ಗುರಿ ತಲುಪುವವರೆಗೂ ಪ್ರಯತ್ನ ಮುಂದುವರೆಸಬೇಕು ಎಂದರು.

ಭಾರತ ಕೃಷಿ ಪ್ರಧಾನ ರಾಷ್ಟ್ರ.ಇಲ್ಲಿ ಯುವಜನರೇ ಪ್ರಮುಖ ಆಸ್ತಿ.ಅವರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಬಲೀಕರಣಗೊಳಿಸಬೇಕು.ಹೆಚ್ಚು ಅಂಕ ಪಡೆದರೆ ಒಳ್ಳೆಯ ಸ್ಥಾನ ಸಿಗುತ್ತದೆ.ಕಡಿಮೆ ಅಂಕ ಪಡೆದರೆ ನನ್ನಂತೆ ಲೋಕಾಯುಕ್ತರಾಗಬಹುದು.ನನಗೆ ಪಿಯುಸಿಯಲ್ಲಿ ಉತ್ತಮ ಅಂಕ ಸಿಕ್ಕಿದ್ದರೆ ಡಾಕ್ಟರ್ ಆಗ್ತಾ ಇದ್ದೆ. ಕಡಿಮೆ ಸಿಕ್ಕಿದ್ದಕ್ಕಾಗಿ ಎಲ್‍ಎಲ್‍ಬಿ ಸೇರಿ ಸ್ವಪರಿಶ್ರಮದ ಮೂಲಕ ಲೋಕಾಯುಕ್ತ ಹುದ್ದೆಗೇರಿದ್ದೇನೆ ಎಂದು ಹೇಳಿದರು.

ಶಾಸಕ ಭೆರತಿ ಸುರೇಶ್ ಮಾತನಾಡಿ, ಶ್ರೀಮಂತರ ಮಕ್ಕಳು ಹಣ ಕೊಟ್ಟು ಒಳ್ಳೆಯ ಟ್ಯೂಷನ್‍ಗೆ ಹೋಗುತ್ತಾರೆ.ಬಡವರ ಮಕ್ಕಳಿಗೆ ಅಂತಹ ಅವಕಾಶವಿರುವುದಿಲ್ಲ. ಅಂತಹವರಿಗೆ ಈ ರೀತಿಯ ಸಂಸ್ಥೆಯ ನೆರವು ಬಹಳ ಮುಖ್ಯ ಎಂದರು.

ಕಬೀರ್ ಟ್ರಸ್ಟ್‍ನ ಕಟ್ಟಡ ನಿರ್ಮಾಣಕ್ಕೆ ತಮ್ಮ ಶಾಸಕರ ನಿಧಿ ಮತ್ತು ಸರ್ಕಾರದಿಂದ 20 ಲಕ್ಷ ರೂ.ಅನುದಾನ ಒದಗಿಸಿಕೊಡುವುದಾಗಿ ಅವರು ಹೇಳಿದರು.
ಮಾಜಿ ಸಂಸದ ಜಿ.ನಾರಾಯಣಸ್ವಾಮಿ, ಟ್ರಸ್ಟ್‍ನ ಅಧ್ಯಕ್ಷ ಟಿ.ಪ್ರಭಾಕರ್, ಉದ್ಯಮಿ ರಾಜಶೇಖರರಾವ್ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಟ್ರಸ್ಟ್ 33 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಸುಮಾರು 700 ರಿಂದ 800 ಮಂದಿಯಂತೆ ಈವರೆಗೂ 25 ಸಾವಿರ ಜನರಿಗೆ ಉಚಿತ ಟ್ಯೂಷನ್ ನೀಡಿರುವುದಾಗಿ ತಿಳಿಸಿದೆ.

ಟ್ರಸ್ಟ್‍ನ ಟ್ಯೂಷನ್‍ನಲ್ಲಿ ಭಾಗವಹಿಸಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ