ಬೆಂಗಳೂರು,ಜ.13- ಒಂದೇ ಹಂತದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಫೆ.8ರಂದು ನಾನು 2019-20ರ ಹೊಸ ಮುಂಗಡಪತ್ರವನ್ನು ಮಂಡಿಸುತ್ತಿದ್ದೇನೆ.ಈ ಹಿಂದೆ ನಾಲ್ಕು ಹಂತಗಳಲ್ಲಿ ಸಾಲ ಮನ್ನಾ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದೆವು. ಆದರೆ ನಾಲ್ಕು ಹಂತಗಳ ಬದಲು ಒಂದೇ ಹಂತದಲ್ಲಿ ಸಂಪೂರ್ಣ ಸಾಲಮನ್ನಾ ಮಾಡುವ ಘೋಷಣೆ ಹೊರಡಿಸುತ್ತೇವೆ ಎಂದು ಹೇಳಿದರು.
ಸುದ್ದಿಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ರೈತರ ಸಾಲಮನ್ನಾ ದೋಸ್ತಿ ಸರ್ಕಾರದ ಒಂದು ನಾಟಕ ಮತ್ತು ಲಾಲಿಪಾಪ್ ಎಂಬ ಪ್ರಧಾನಿ ಮತ್ತು ಬಿಜೆಪಿ ಮುಖಂಡರ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರ ಕೃಷಿ ಸಾಲ ಮನ್ನಾ ಮಾಡಲು ಆಶ್ವಾಸನೆ ನೀಡಿ ಅದರ ಬೆನ್ನಲೇ ರೈತರ ಸಾಲವನ್ನು ವಸೂಲಿ ಮಾಡಲು ಬ್ಯಾಂಕ್ಗಳಿಗೆ ನೋಟಿಸ್ ನೀಡಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನಿನ್ನೆ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನೀಡಿರುವ ಹೇಳಿಕೆಗೆ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ನೋಟಿಸ್ಗಳನ್ನು ನಾವು ನೀಡಿಲ್ಲ. ಅವುಗಳನ್ನು ರಾಷ್ಟ್ರೀಕೃತ ಬ್ಯಾಂಕ್ಗಳು ನೀಡಿವೆ. ಇಂಥ ಬ್ಯಾಂಕ್ಗಳ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಬಿಜೆಪಿ ನಾಯಕರಿಗೆ ರೈತರ ದುಸ್ಥಿತಿಯನ್ನು ಬಗೆಹರಿಸುವ ಮನಸ್ಸಿಲ್ಲ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಕೈಗೊಂಡ ಉತ್ತಮ ಕ್ರಮಗಳನ್ನು ಒಪ್ಪಿಕೊಳ್ಳುವ ಒಳ್ಳೆಯ ಮನಸ್ಥಿತಿಯೂ ಇಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ಮಾಡಿದರು.