ವಾಷಿಂಗ್ಟನ್: ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಹಾಗೂ ವಿಶ್ವಸಂಸ್ಥೆಯಲ್ಲಿ ಮಾಜಿ ಅಮೆರಿಕಾ ರಾಯಬಾರಿ ನಿಕ್ಕಿ ಹ್ಯಾಲೆ ರೇಸ್ ನಲ್ಲಿದ್ದಾರೆ ಎಂದು ಹೇಳಲಾಗಿದೆ.
ಜಿಮ್ ಯಂಗ್ ಕಿಮ್ ಅವರು ಎರಡನೇ ಅವಧಿ ಮುಕ್ತಾಯಗೊಳ್ಳಲು ಇನ್ನೂ ಮೂರು ವರ್ಷ ಬಾಕಿ ಇದ್ದರೂ ಹಠಾತ್ತನೇ ಸೋಮವಾರ ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿದ್ದಾರೆ. ಈ ಹಿನ್ನಲೆಯಲ್ಲಿ ಟ್ರಂಪ್ ಪುತ್ರಿ ಇವಾಂಕಾ ಹಾಗೂ ನಿಕ್ಕಿ ಈ ಸ್ಥಾನದ ರೇಸ್ ನಲ್ಲಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳಷ್ಟೇ ವಿಶ್ವಸಂಸ್ಥೆಯಲ್ಲಿ ಅಮೆರಿಕಾದ ರಾಯಬಾರಿ ಆಗಿದ್ದ ನಿಕ್ಕಿ ಹ್ಯಾಲೆ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಅಂತಾರಾಷ್ಟ್ರೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಡೆವಿಡ್ ಮಾಲ್ಪಸ್, ಮತ್ತು ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಅಮೆರಿಕಾದ ಏಜೆನ್ಸಿ ಮುಖ್ಯಸ್ಥ ಮಾರ್ಗ್ ಗ್ರೀನ್ ಅವರಿಂದಲೂ ರಾಜೀನಾಮೆ ಪಡೆಯಲಾಗಿತ್ತು.
ಸೌದಿ ಬೆಂಬಲಿತ ವಿಶ್ವ ಬ್ಯಾಂಕ್ ನಲ್ಲಿ 2017 ರಲ್ಲಿ ಮಹಿಳಾ ಉದ್ಯಮ ಪ್ರೋತ್ಸಾಹಕ್ಕಾಗಿ 1 ಬಿಲಿಯನ್ ಡಾಲರ್ ಮೊತ್ತದ ನಿಧಿ ಮೀಸಲಿಡುವಂತೆ ಮಾಡುವಲ್ಲಿ ಇವಾಂಕ ಟ್ರಂಪ್ ಶ್ರಮ ವಹಿಸಿದ್ದಾರೆ.
ಎರಡನೇ ವಿಶ್ವ ಸಮರದ ನಂತರ ಸ್ಥಾಪನೆಯಾದ ವಿಶ್ವ ಬ್ಯಾಂಕ್ ನಲ್ಲಿ ಹೆಚ್ಚು ಷೇರುಗಳನ್ನು ಹೊಂದಿರುವ ಅಮೆರಿಕಾ ದೇಶವೇ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಅಲಿಖಿತ ಒಪ್ಪಂದವಾಗಿ ನಡೆದುಬಂದಿದೆ.
Ivanka Trump, Nikki Haley In Race For World Bank President’s Post: Report