ಬೆಂಗಳೂರು, ಮಾ.12- ರಾಜ್ಯಸಭೆಗೆ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿರುವ ರಾಜೀವ್ಚಂದ್ರಶೇಖರ್ ಕನ್ನಡಿಗರಾಗಿದ್ದು, ಕರ್ನಾಟಕದಲ್ಲೇ ಹುಟ್ಟಿ ಬೆಳೆದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.
ರಾಜೀವ್ಚಂದ್ರಶೇಖರ್ ಅವರೊಂದಿಗೆ ವಿಧಾನಸೌಧಕ್ಕೆ ಆಗಮಿಸಿ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಿದ ನಂತರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್ಚಂದ್ರಶೇಖರ್ 12 ವರ್ಷಗಳ ಕಾಲ ರಾಜ್ಯಸಭೆಯ ಸದಸ್ಯರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ.
ಸ್ಟೀಲ್ಬ್ರಿಡ್ಜ್, ಕೆರೆ ಸಂರಕ್ಷಣೆ, ಪರಿಸರದಂತಹ ವಿಷಯಗಳು ಬಂದಾಗ ಚಂದ್ರಶೇಖರ್ ಅವರ ಹೋರಾಟ ಸ್ಮರಣೀಯವಾಗಿದೆ.
ಬೆಂಗಳೂರಿಗೆ ವಿಷನ್ 20-20 ಎಂಬ ಯೋಜನೆಯನ್ನು ರೂಪಿಸಿಕೊಟ್ಟಿದ್ದಾರೆ. ಸಂಸತ್ನಲ್ಲಿ ರಾಜ್ಯಸಭೆ ಸದಸ್ಯರಾಗಿ ಕರ್ನಾಟಕದ ಪರವಾಗಿ ಹೋರಾಟ ಮಾಡಿದ್ದಾರೆ ಎಂದು ಹೇಳಿದರು. ರಾಜೀವ್ಚಂದ್ರಶೇಖರ್ ಕನ್ನಡಿಗರಲ್ಲ ಎಂಬ ಆಕ್ಷೇಪ ಸರಿಯಲ್ಲ. ಅವರು ಕರ್ನಾಟಕದಲ್ಲೇ ಹುಟ್ಟಿ ಇಲ್ಲೇ ಬೆಳೆದವರು. ಅಪ್ಪಟ ಕನ್ನಡಿಗರು ಎಂದು ಸಮರ್ಥಿಸಿಕೊಂಡರು. ನಾಮಪತ್ರ ಸಲ್ಲಿಕೆ ವೇಳೆ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದರಾದ ಶೋಭಾಕರಂದ್ಲಾಜೆ, ಪಿ.ಸಿ.ಮೋಹನ್, ಶಾಸಕರಾದ ಅರವಿಂದಲಿಂಬಾವಳಿ, ವಿಜಯ್ಕುಮಾರ್, ವಿಶ್ವನಾಥ್ ಮತ್ತಿತರರು ಹಾಜರಿದ್ದರು.