ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಸ್ಯಾಟ್ ಲೈಟ್ ಪೋನ್

ಬೆಂಗಳೂರು,ಜ.12-ಮೀನುಗಾರರ ನಾಪತ್ತೆ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಸ್ಯಾಟ್‍ಲೈಟ್ ಪೋನ್‍ಗಳ ಬಳಕೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಇಂದಿಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನುಗಾರರ ಸ್ಯಾಟ್‍ಲೈಟ್ ಪೋನ್‍ಗಳ ಬಳಕೆಗೆ ಕಂಪನಿ ಮುಂದೆ ಬಂದಿದ್ದು, ಶೇ.50ರ ರಿಯಾಯ್ತಿಯಲ್ಲಿ ಪೋನ್‍ಗಳನ್ನು ಒದಗಿಸುವ ಕುರಿತಂತೆ ಪರಿಶೀಲಿಸಲಾಗುತ್ತಿದೆ. ಮೀನುಗಾರಿಕೆ ಕಾಲೇಜಿನ ಪ್ರಾಂಶುಪಾಲರಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಪೋನ್ ಬಳಕೆ ಯಾವ ರೀತಿಯಲ್ಲಿ ಎಂಬ ಬಗ್ಗೆ ಮಾಹಿತಿ ಪಡೆಯಲಾಗುವುದು.ದೋಣಿ ಅಥವಾ ಹಡಗಿನಲ್ಲಿ ಸ್ಯಾಟ್‍ಲೈಟ್ ಪೋನ್‍ಗಳನ್ನು ಇರಿಸುವುದರಿಂದ ಅದನ್ನು ಪತ್ತೆಹಚ್ಚುವ ಸಾಧ್ಯತೆ, ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಿ ನಿರ್ಧಾರಕೈಗೊಳ್ಳಲಾಗುವುದು. ಈ ರೀತಿಯ ಪೋನ್ ಬಳಕೆಯಿಂದ ಮೀನುಗಾರರ ನಾಪತ್ತೆಯಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನೆರವಿಗೆ ಬರಲಿದೆ ಎಂದು ಅಭಿಪ್ರಾಯಪಟ್ಟರು.

ನಾಪತ್ತೆಯಾದ ಮೀನುಗಾರರ ಕುಟುಂಬದವರಿಗೆ ಮುಖ್ಯಮಂತ್ರಿ ನಿಧಿಯಿಂದ 1 ಲಕ್ಷ ರೂ.ಗಳನ್ನು ಜಿಲ್ಲಾಧಿಕಾರಿಗಳ ಮೂಲಕ ತಲುಪಿಸಲು ಕ್ರಮಕೈಗೊಳ್ಳಲಾಗಿದೆ. ನಾಪತ್ತೆಯಾಗಿರುವ ಮೀನುಗಾರರು ಮೀನುಗಳನ್ನು ಸಂಗ್ರಹಿಸಲು ತೆಗೆದುಕೊಂಡು ಹೋಗಿದ್ದ ದೊಡ್ಡ ದೊಡ್ಡ ಬುಟ್ಟಿಗಳು ದೊರೆತಿದ್ದು, ಈ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ.ಕೇಂದ್ರಕ್ಕೆ ಮತ್ತೊಂದು ಪತ್ರ ಬರೆದು ಇವರ ಪತ್ತೆಗೆ ಹೆಚ್ಚಿನ ನೆರವು ನೀಡಲು ಕೋರಲಾಗಿದೆ ಎಂದು ಮಾಹಿತಿ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ