ಮೂರು ಹಂತದ ಸಮೀಕ್ಷಾ ವರದಿಯ ನಂತರ ರಣತಂತ್ರ ರೂಪಿಸಲಿರುವ ಅಮಿತ್ ಶಾ

ಬೆಂಗಳೂರು,ಜ.12-ಈ ಬಾರಿ ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆಗೆ ಬಿಜೆಪಿ ಮೊದಲ ಬಾರಿ ಮೂರು ಯೋಜನೆಗಳನ್ನು ರೂಪಿಸಿದೆ. ಪ್ರತಿ ಬಾರಿಯೂ ರಹಸ್ಯ ಸಮೀಕ್ಷೆ ನಡೆಸಿಯೇ ಟಿಕೆಟ್ ಹಂಚಿಕೆ ಮಾಡುತ್ತಿದ್ದ ಬಿಜೆಪಿ, ಈ ಬಾರಿ ಸ್ವಲ್ಪ ವಿಶೇಷವಾಗಿ ಮೂರು ರಹಸ್ಯ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತನ್ನ ರಹಸ್ಯ ಸಮೀಕ್ಷಾ ನೇತೃತ್ವದ ತಂಡಕ್ಕೆ ಕರ್ನಾಟಕ ರಾಜ್ಯದ ಮಟ್ಟಿಗೆ ಹೊಸ ಟಾಸ್ಕ್ ನೀಡಿದ್ದಾರೆ. ರಹಸ್ಯ ಸಮೀಕ್ಷೆಯಲ್ಲಿ ಮೂರು ಹಂತ ರೂಪಿಸಿದ್ದು, ಪ್ಲಾನ್ ಎ, ಪ್ಲಾನ್ ಬಿ ಮತ್ತು ಪ್ಲಾನ್ ಸಿ ಹೆಸರಿನಲ್ಲಿ ಸಮೀಕ್ಷೆ ನಡೆಯಲಿದೆ.

ಪ್ಲಾನ್ ಎ- ಬಿಜೆಪಿ ನೂರಕ್ಕೆ ನೂರು ಗೆಲ್ಲಬಹುದಾದ ಲೋಕಸಭಾ ಕ್ಷೇತ್ರಗಳು, ಪ್ಲಾನ್ ಬಿ- ಗೆಲ್ಲಲು ಪ್ರಯತ್ನಿಸಬಹುದಾದ ಲೋಕಸಭಾ ಕ್ಷೇತ್ರಗಳು, ಪ್ಲಾನ್ ಸಿ- ಬಿಜೆಪಿಗೆ ಗೆಲುವ ಸಾಧ್ಯವಿರದ ಲೋಕಸಭಾ ಕ್ಷೇತ್ರಗಳು.

ಈ ರೀತಿ ಒಟ್ಟು ಮೂರು ಹಂತದ ಸಮೀಕ್ಷಾ ವರದಿಯನ್ನು ಅಮಿತ್ ಷಾ ತರಿಸಿಕೊಳ್ಳಲಿದ್ದಾರೆ. ಸಮೀಕ್ಷಾ ವರದಿ ಆಧಾರದ ಮೇಲೆ ರಣತಂತ್ರ ರೂಪಿಸಲಿದ್ದಾರೆ.ಈ ಸಮೀಕ್ಷಾ ವರದಿ ಮಾಹಿತಿ ಅಮಿತ್ ಷಾ ಮತ್ತು ಬಿ.ಎಸ್.ಯಡಿಯೂರಪ್ಪ ಅವರುಗಳನ್ನು ಬಿಟ್ಟರೆ ಮತ್ಯಾರಿಗೂ ಗೊತ್ತಿರುವುದಿಲ್ಲ.

ಮೊದಲ ಹಂತದಲ್ಲಿ ಈಗಾಗಲೇ ಎಲ್ಲಾ ಲೋಕಸಭಾ ಕ್ಷೇತ್ರಗಳ ಸ್ಥಳೀಯ ನಾಯಕರೊಂದಿಗೆ ಚರ್ಚೆ ನಡೆಸಿರುವ ಯಡಿಯೂರಪ್ಪ, ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಅಮಿತ್ ಷಾಗೆ ರವಾನಿಸಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಇರುವ ಆಕಾಂಕ್ಷಿಗಳು ಎಷ್ಟು ಜನ, ಹಾಲಿ ಇರುವ ಸಂಸದರ ಕ್ಷೇತ್ರದಲ್ಲಿ, ಬಿಜೆಪಿ ಸಂಸದರಿಲ್ಲದ ಕ್ಷೇತ್ರಗಳಲ್ಲಿ ಎಷ್ಟು ಜನ ಆಕಾಂಕ್ಷಿಗಳಿದ್ದಾರೆ, ಹಾಲಿ ಸಂಸದರಲ್ಲಿ ಪುನರಾಯ್ಕೆ ಆಗುವ ಸಾಧ್ಯತೆ ಹೆಚ್ಚಿರುವವರು ಯಾರು, ಯಾವ ಸಂಸದರಿಗೆ ಈ ಬಾರಿ ಗೆಲ್ಲುವ ಸಾಧ್ಯತೆ ಕಡಿಮೆ ಇದೆ, ಆಕಾಂಕ್ಷಿಗಳಲ್ಲಿ ಯಾರು ಹೆಚ್ಚಿನ ವರ್ಚಸ್ಸು ಹೊಂದಿದ್ದಾರೆ ಎಂಬ ವರದಿ ಈಗಾಗಲೇ ಅಮಿತ್ ಷಾ ಕೈಸೇರಿದೆ.

ರಹಸ್ಯ ಸಮೀಕ್ಷೆ ಹಾಗೂ ರಾಜ್ಯ ಸಮಿತಿ ನೀಡಿದ ಮಾಹಿತಿಯಂತೆ ಅಮಿತ್ ಷಾ ಅವರೇ ಈ ಬಾರಿ ಟಿಕೆಟ್ ಹಂಚಿಕೆ ಮಾಡಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ನಿರ್ಧಾರಕ್ಕೆ ಹೆಚ್ಚಿನ ಮನ್ನಣೆ ನೀಡಲಿದ್ದಾರೆ ಎನ್ನುವುದು ಪಕ್ಕಾ ಆಗಿದೆ. ವಿಧಾನಸಭಾ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಆದ ಗೊಂದಲ ಈಗ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಯಡಿಯೂರಪ್ಪ ಅವರಿಗೆ ಚುನಾವಣೆಯ ಸಂಪೂರ್ಣ ಹೊಣೆಗಾರಿಕೆ ನೀಡಲಿದ್ದಾರೆ.

ಒಂದು ವೇಳೆ ಯಾವುದಾದರೂ ಕ್ಷೇತ್ರದಲ್ಲಿ ಬಂಡಾಯವೆದ್ದರೆ, ಭಿನ್ನಮತ ತಲೆದೂರಿದರೆ ಆಗ ಕೈಗೊಳ್ಳಬೇಕಾದ ನಿರ್ಧಾರ, ಪಕ್ಷದ ಅಭ್ಯರ್ಥಿ ಗೆಲುವಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಹೇಗೆ, ಎಲ್ಲಿ ಯಾವ ಅಭ್ಯರ್ಥಿ ಬಂಡೆದ್ದರೆ ಹೆಚ್ಚಿನ ಹಾನಿಯಾಗಲಿದೆ ಎನ್ನುವ ಕುರಿತು ರಹಸ್ಯ ಸಮೀಕ್ಷಾ ವರದಿ ಕೈ ಸೇರಿದ ನಂತರ ಚರ್ಚೆ ನಡೆಸಲಿದ್ದಾರೆ ಎಂದು ಬಿಜೆಪಿ ಆಪ್ತ ಮೂಲಗಳು ಖಚಿತ ಮಾಹಿತಿ ನೀಡಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ