ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟ ಇಸ್ರೋ

ಬೆಂಗಳೂರು,ಜ.11-ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದ್ದು, ಇದೇ ಮೊದಲ ಬಾರಿಗೆ ಮಾನವ ಸಹಿತ ಗಗನಯಾನಕ್ಕೆ ಮುಂದಾಗಿದೆ.

ಈ ಕುರಿತು ಬೆಂಗಳೂರಿನ ಇಸ್ರೋ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಇಸ್ರೋ ಅಧ್ಯಕ್ಷ ಕೆ.ಸಿವನ್ ಮಾಹಿತಿ ನೀಡಿದರು.
ಗಗನಯಾನದಲ್ಲಿ ಮಾನವ 7 ದಿನ ಕಳೆಯುವ ಕ್ಷಣಕ್ಕೆ ಇಸ್ರೋ ಸಜ್ಜಾಗುತ್ತಿದೆ. ಮೊದಲು ಮಾನವ ರಹಿತ ಯಾನಕ್ಕೆ ಮುಂದಾಗಿದ್ದು ಮೂರು ಹಂತದಲ್ಲಿ ಆರಂಭವಾಗುವ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ 2021 ಡಿಸೆಂಬರ್‍ನಲ್ಲಿ ಮಾನವ ಸಹಿತ ನಭಕ್ಕೇರಲಿದೆ ಎಂದರು.

ಈ ಪ್ರಧಾನ ಯೋಜನೆಗೆ ಕೇಂದ್ರದಿಂದ ಒಪ್ಪಿಗೆ ದೊರೆತಿದ್ದು, 30 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ.ಈ ಅನುದಾನದಲ್ಲಿ ಪಿಎಸ್‍ಎಲ್‍ವಿ ರಾಕೆಟ್‍ಗಳನ್ನು ಸಿದ್ದಪಡಿಸಲು 10 ಸಾವಿರ ಕೋಟಿ, ಗಗನಯಾನ ಯೋಜನೆಯ ಚಾಲನೆಗೆ 10 ಸಾವಿರ ಕೋಟಿ ಹಾಗೂ ಉಪಗ್ರಹಗಳ ನಿರ್ವಹಣೆಗೆ 10 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿಸಿದರು.

ಗಗನಯಾನ ಯೋಜನೆಯಿಂದ 20 ಸಾವಿರ ಉದ್ಯೋಗಗಳು ಸೃಷ್ಠಿಯಾಗಲಿವೆ.ಇಸ್ರೋಗೆ ಗಗನಯಾನ ಯೋಜನೆ ಮುಖ್ಯ ತಿರುವು ಕೊಡಲಿದೆ.ಮೂವರು ಮಾನವರನ್ನು ಗಗನಯಾನ ಯೋಜನೆಯಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.

ಇವರು 7 ದಿನ ಬಾಹ್ಯಾಕಾಶದಲ್ಲಿ ಅಧ್ಯಯನ, ಸಂಶೋಧನೆ ನಡೆಸುತ್ತಾರೆ ಎಂದರು.

ಮಾನವ ಸಹಿತ ಗಗನಯಾನ ಯೋಜನೆಗೂ ಮುನ್ನ ಎರಡು ಮಾನವ ರಹಿತ ಯೋಜನೆಗಳನ್ನು 2020ರ ಡಿಸೆಂಬರ್ ಮತ್ತು 2021ರ ಜುಲೈನಲ್ಲಿ ನಡೆಸುತ್ತೇವೆ ಎಂದು ತಿಳಿಸಿದರು.

ಮಾನವ ಸಹಿತ ಗಗನಯಾನ ಯೋಜನೆಗೆ ಪ್ರಧಾನಿಗಳು ಚಾಲನೆ ನೀಡಲಿದ್ದಾರೆ. ಬಾಹ್ಯಾಕಾಶದಲ್ಲಿ ಗಗನ ಯಾತ್ರಿಗಳಿಗೆ ವಾಸ್ತವ್ಯದ ವ್ಯವಸ್ಥೆ, ಅವರಿಗೆ ಮೂಲಸೌಕರ್ಯ, ಅವರನ್ನು ವಾಪಸ್ ಸುರಕ್ಷಿತವಾಗಿ ಕರೆತರುವುದು ನಮಗೆ ಸವಾಲಿನ ಕೆಲಸಗಳಾಗಿವೆ ಎಂದರು.

ಗಗನ ಯಾನ ಯೋಜನೆ ಪ್ರಾಥಮಿಕ ತರಬೇತಿ ಭಾರತದಲ್ಲಿ ನಡೆಯಲಿದೆ.ಮುಖ್ಯ ತರಬೇತಿ ರಷ್ಯ ಅಥವಾ ಇನ್ನಿತರ ದೇಶಗಳಲ್ಲಿ ನೀಡಲು ಚಿಂತನೆ ನಡೆಸಲಾಗಿದೆ.ಮೂವರು ಗಗನಯಾತ್ರಿಗಳಲ್ಲಿ ಒಬ್ಬರು ಮಹಿಳಾ ಯಾತ್ರಿ ಇರಬೇಕು ಎಂಬ ಉದ್ದೇಶ ಇಸ್ರೋದ್ದಾಗಿದೆ ಎಂದು ಹೇಳಿದರು.

ಜಿಸ್ಯಾಟ್-20 ಉಪಗ್ರಹ ಉಡಾವಣೆ:
ಸೆಪ್ಟೆಂಬರ್ ಅಥವಾ ಅಕ್ಟೋಬರ್‍ನಲ್ಲಿ ಜಿಸ್ಯಾಟ್-20 ಸಂಪರ್ಕ ಉಪಗ್ರಹ ಉಡಾವಣೆ ಮಾಡಲಿದ್ದು, ಇದರಿಂದ ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ ಉಪಗ್ರಹ ಉಡಾವಣೆ ಪೂರ್ಣವಾಗಲಿದೆ. ಇದರಿಂದ 100ಜಿಬಿಎಸ್ ಇಂಟರ್‍ನೆಟ್ ಸ್ಪೀಡ್ ಲಭ್ಯವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ತಿಳಿಸಿದರು.

ಪ್ರಸಕ್ತ ವರ್ಷ 32 ಪ್ರಮುಖ ಯೋಜನೆ ಕಾರ್ಯಗತ ಮಾಡಲಿದ್ದೇವೆ. ಅಷ್ಟೇ ಅಲ್ಲದೇ ಈ ವರ್ಷ ಮರುಬಳಕೆಯ ರಾಕೆಟ್ ಪರೀಕ್ಷಾರ್ಥ ಉಡಾವಣೆ ಮಾಡಲಿದ್ದೇವೆ ಎಂದರು.

ಇಸ್ರೋ ಟಿವಿ:
ಇಸ್ರೋ ಟಿವಿ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದ್ದು ಇನ್ನು ಮೂರು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ತಿಳಿಸಿದರು.
ವಿಜ್ಞಾನ, ತಂತ್ರಜ್ಞಾನ ಹಾಗೂ ಕೃಷಿ ಬಗ್ಗೆ ಮಾಹಿತಿ ನೀಡುವ ವಾಹಿನಿ ಈಗಾಗಲೇ ಅಂತಿಮ ಹಂತದ ಸಿದ್ಧತೆ ಪೂರ್ಣಗೊಂಡಿದೆ ಎಂದರು.

ಆದಿತ್ಯ ಎಲ್-1 ಯೋಜನೆ
ಇಸ್ರೋದಿಂದ ಅಂತರ್ ಗ್ರಹ ಗಗನಯಾನ ಯೋಜನೆ ಚಾಲನೆಯಲ್ಲಿದ್ದು 2020ರ ಜನವರಿಯಲ್ಲಿ ಇಸ್ರೋ ಆದಿತ್ಯ ಎಲ್-1 ಯೋಜನೆ ಸಾಕಾರವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ಹೇಳಿದ್ದಾರೆ.

ಪ್ರಮುಖವಾಗಿ ಸೂರ್ಯ ಹಾಗೂ ಹಿಲಿಯೋಫಿಸಿಕ್ಸ್ ಕುರಿತು ನೌಕೆಯು ಅಧ್ಯಯನ ಮಾಡಲಿದೆ ಎಂದು ತಿಳಿಸಿದ್ದಾರೆ.

ಚಂದ್ರಯಾನ-2
ಇಸ್ರೋ ಮಹತ್ವದ ಚಂದ್ರಯಾನ-2 ಯೋಜನೆ ಈ ವರ್ಷದ ಏಪ್ರಿಲ್ ಮಧ್ಯಭಾಗದಲ್ಲಿ ನಡೆಯಲಿದೆ.ಚಂದ್ರಯಾನ-2ರಲ್ಲಿ ರೋವರ್ ಚಂದ್ರನ ಮೇಲ್ಮೇ ವಾತಾವರಣವನ್ನು ಪರೀಕ್ಷೆ ಮಾಡಲಿದೆ. ಲ್ಯಾಂಡರ್ ಮತ್ತು ರೋವರ್ ಕಾರ್ಯಾವಧಿ 14 ದಿನಗಳಾಗಲಿವೆ. ಚಂದ್ರಯಾನದ ರೋವರ್ ಚಂದ್ರನಲ್ಲಿ 500 ಮಿಟರ್ ನಷ್ಟು ಚಲಿಸುವ ರೀತಿ ಯೋಜನೆ ರೂಪಿಸುತ್ತಿದ್ದೇವೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ