ಬೆಂಗಳೂರು,ಜ.10-ನಾಳೆಯಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣೆ ಸಭೆ ಎರಡು ದಿನಗಳ ಕಾಲ ನಡೆಯಲಿದೆ. ರಾಮ್ಲೀಲಾ ಮೈದಾನದಲ್ಲಿ ನಡೆಯಲಿರುವ ಕಾರ್ಯಕಾರಿಣಿ ಸಭೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಾಲನೆ ನೀಡಲಿದ್ದಾರೆ.ಶನಿವಾರ ಪ್ರಧಾನಿ ನರೇಂದ್ರಮೋದಿ ಅವರು ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.ಕಾರ್ಯಕಾರಿಣಿ ಸಭೆಯನ್ನುಇದೇ ಮೊದಲ ಬಾರಿಗೆ ರಾಮ್ಲೀಲಾ ಮೈದಾನದಲ್ಲಿ ನಡೆಸಲಾಗುತ್ತಿದೆ.
ಬಿಜೆಪಿ ಆಡಳಿತವಿರುವ ಮುಖ್ಯಮಂತ್ರಿಗಳು ಎಲ್ಲಾ ರಾಜ್ಯ ಘಟಕಗಳ ಅಧ್ಯಕ್ಷರು, ಕೇಂದ್ರ ಸಚಿವರು, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಜಿಲ್ಲಾಧ್ಯಕ್ಷರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಗಳ ಉಸ್ತುವಾರಿಗಳು, ಸಹಉಸ್ತುವಾರಿಗಳು, ಸಾಮಾಜಿಕ ಜಾಲತಾಣದ ಮುಖ್ಯಸ್ಥರು, ವಕ್ತಾರರು ಸೇರಿದಂತೆ ಎಲ್ಲ ರಾಜ್ಯಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ನಾಳಿನ ಮೊದಲ ಸಭೆಯನ್ನು ಅಮಿತ್ ಷಾ ಉದ್ಘಾಟಿಸಲಿದ್ದು, ಕೇಂದ್ರ ಸಚಿವರು ಹಾಗೂ ಕೆಲ ಹಿರಿಯ ಮುಖಂಡರು ಭಾಷಣ ಮಾಡಲಿದ್ದಾರೆ. ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆಗೆ ದಿನಾಂಕ ನಿಗದಿಯಾಗುವ ಸಂಭವವಿರುವುದರಿಂದ ಮಹಾಸಮರಕ್ಕೆ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳು, ಎದುರಾಳಿ ಪಕ್ಷಗಳನ್ನು ಯಾವ ರೀತಿ ಎದುರಿಸುವುದು, ಚುನಾವಣಾ ಕಾರ್ಯತಂತ್ರ, ಪ್ರತಿಪಕ್ಷಗಳ ತಂತ್ರಕ್ಕೆ ಕಾರ್ಯತಂತ್ರ, ಪ್ರಣಾಳಿಕೆ ಸಿದ್ಧಪಡಿಸುವಿಕೆ, ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಕೈಗೊಳ್ಳಬೇಕಾದ ರಣತಂತ್ರಗಳ ಬಗ್ಗೆ ಅಭಿಪ್ರಾಯಪಡೆಯಲಿದ್ದಾರೆ.
ಒಂದೆಡೆ ಬಿಜೆಪಿ ವಿರುದ್ಧ ಮಹಾಘಟ್ಬಂಧನ್, ಮತ್ತೊಂದೆಡೆ ತೃತೀಯರಂಗ ಒಂದುಗೂಡುತ್ತಿರುವುದು, ಇತ್ತೀಚೆಗೆ ನಡೆದ ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಉಂಟಾದ ಹಿನ್ನಡೆ, ಲೋಕಸಮರಕ್ಕೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿ ಕಾರ್ಯಕರ್ತರನ್ನು ಹುರಿದುಂಬಿಸಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಪಕ್ಷದ ಹಿರಿಯರು ಸಲಹೆ-ಸೂಚನೆ ಹಾಗೂ ಮಾರ್ಗದರ್ಶನವನ್ನು ಮಾಡಲಿದ್ದಾರೆ.
ರಾಜ್ಯದಿಂದ ಸುಮಾರು 500ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ನಿರ್ಮಲಾ ಸೀತಾರಾಮನ್, ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಈಗಾಗಲೇ ನವದೆಹಲಿಗೆ ತೆರಳಿದ್ದಾರೆ.
ಕೇಂದ್ರದ ವಿರುದ್ಧ ಪ್ರತಿಪಕ್ಷಗಳು ನಡೆಸುತ್ತಿರುವ ಆರೋಪಕ್ಕೆ ಪ್ರಧಾನಿ ಸೇರಿದಂತೆ ಬಿಜೆಪಿಯ ನಾಯಕರು ತಿರುಗೇಟು ನೀಡುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ಐತಿಹಾಸಿಕ ಸಮಾವೇಶವನ್ನಾಗಿ ನಡೆಸಲು ಕಮಲ ನಾಯಕರು ಮುಂದಾಗಿದ್ದಾರೆ.
ಆಪರೇಷನ್ ಕಮಲಕ್ಕೆ ಮುನ್ನುಡಿ:
ಈ ಬೆಳವಣಿಗೆಗಳ ನಡುವೆಯೇ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನವನ್ನು ಮುಂದುವರೆಸಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಕಾಂಗ್ರೆಸ್ನ 12 ಜನ ಶಾಸಕರಿಂದ ರಾಜೀನಾಮೆ ಕೊಡಿಸುತ್ತಿದ್ದಂತೆ, ಸಿಎಂ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನಮ್ಮ ಶಾಸಕರಿಗೆ ಬಲೆ ಬೀಸುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಆಪರೇಷನ್ ಡಜನ್ ಪೂರ್ಣವಾಗುವವರೆಗೂ ನಮ್ಮ ಶಾಸಕರು ದೆಹಲಿಯಲ್ಲಿಯೇ ಇರಬೇಕು. ಒಂದು ವೇಳೆ ಅಗತ್ಯ ಬಿದ್ದರೆ ಶಾಸಕರನ್ನು ಮುಂಬೈಗೆ ಕಳುಹಿಸಲಾಗುತ್ತದೆ ಎಂದು ಅಮಿತ್ ಷಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ 104 ಜನ ಶಾಸಕರು ಶುಕ್ರವಾರ ಬೆಳಗ್ಗೆ ದೆಹಲಿಗೆ ಬರಬೇಕು.ಯಾವುದೇ ಶಾಸಕರು ತಪ್ಪಿಸಿಕೊಳ್ಳುವಂತಿಲ್ಲ, ಎಲ್ಲರೂ ದೆಹಲಿಯಲ್ಲೇ ಮೂರು ದಿನ ಇರಬೇಕು. ಎಲ್ಲ ಶಾಸಕರನ್ನು ದೆಹಲಿಗೆ ಕರೆದುಕೊಂಡು ಬರುವ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ್ ಲಿಂಬಾವಳಿ ಹಾಗೂ ಉಮೇಶ್ ಕತ್ತಿ ಅವರು ವಹಿಸಿಕೊಳ್ಳಬೇಕು ಎಂದು ಅಮಿತ್ ಷಾ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ಎರಡು ದಿನಗಳ ಸಭೆಯ ಬಳಿಕ ಭಾನುವಾರ ರಾಜ್ಯ ಶಾಸಕರು ಅಮಿತ್ ಷಾ ಅವರ ನಿರೀಕ್ಷಣೆಯಲ್ಲಿ ಇರಲಿದ್ದಾರೆ.ಇತ್ತ ಕಾಂಗ್ರೆಸ್ ಅತೃಪ್ತ 12 ಜನ ಶಾಸಕರು ಕೂಡ ದೆಹಲಿಯಲ್ಲಿಯೇ ಇದ್ದಾರೆ.ಅವರು ರಾಜ್ಯಕ್ಕೆ ಮರಳಿ ಸೋಮವಾರ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಲಿದ್ದಾರೆ. ಈ ಎಲ್ಲ ಕಾರ್ಯತಂತ್ರಗಳು ವಿಫಲವಾಗದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.