ಬೆಂಗಳೂರು, ಮಾ.12-ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆಲ್ಲಲು, ಬಿಜೆಪಿ ಒಂದು ಸ್ಥಾನ ಗೆಲ್ಲಲು ಅಗತ್ಯ ಸಂಖ್ಯಾ ಬಲ ಹೊಂದಿದ್ದು, ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಮುಂದುವರೆದಿರುವುದರಿಂದ ಚುನಾವಣೆ ಅನಿವಾರ್ಯವಾಗಿರುವುದರಿಂದ ಸಂಖ್ಯಾಬಲದ ಹೊಂದಾಣಿಕೆಯ ಕುದುರೆ ವ್ಯಾಪಾರ ಜೋರಾಗಿದೆ.
ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ ಈಗ 217 ಆಗಿದ್ದು, ಶಾಸಕರಾದ ಪುಟ್ಟಣ್ಣಯ್ಯ, ಖಮರುಲ್ಲಾ ಇಸ್ಲಾಮ್, ಚಿಕ್ಕಮಾದು ಅವರ ನಿಧನ, ಆನಂದ್ಸಿಂಗ್, ಮಾನಪ್ಪ ವಜ್ಜಲ್, ಶಿವರಾಜ್ಪಾಟೀಲ್, ಹಾಲಾಡಿ ಶ್ರೀನಿವಾಸಶೆಟ್ಟಿ ಅವರ ರಾಜೀನಾಮೆಯಿಂದ ಒಟ್ಟು 7 ಶಾಸಕರ ಸ್ಥಾನಗಳು ತೆರವಾಗಿವೆ. ಉಳಿದ 217 ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಪ್ರತಿಯೊಂದು ರಾಜ್ಯಸಭೆ ಸ್ಥಾನ ಗೆಲ್ಲಲು 45 ಶಾಸಕರ ಅಗತ್ಯವಿದೆ.
ಕಾಂಗ್ರೆಸ್ 122, ಬಿಜೆಪಿ 43, ಜೆಡಿಎಸ್ 37 ಶಾಸಕರನ್ನು ಹೊಂದಿದೆ. ಬಿಜೆಪಿ 43 ಶಾಸಕರ ಜತೆ ಬಿಎಸ್ಆರ್ ಕಾಂಗ್ರೆಸ್ನ ಪಿ.ರಾಜೀವ್, ಸಿ.ಪಿ.ಯೋಗೇಶ್ವರ್ ಬಿಜೆಪಿ ಜತೆಯಲ್ಲಿರುವುದರಿಂದ ಒಟ್ಟು 45 ಮತಗಳಾಗಿದ್ದು, ಗೆಲುವಿಗೆ ಯಾವುದೇ ತೊಂದರೆ ಇಲ್ಲ.
ಕಾಂಗ್ರೆಸ್ನ ಒಟ್ಟು 122 ಶಾಸಕರ ಜತೆಗೆ 7 ಮಂದಿ ಜೆಡಿಎಸ್ ಬಂಡಾಯ ಶಾಸಕರು ಜತೆಗಿದ್ದಾರೆ ಎಂದು ಹೇಳಲಾಗುತ್ತಿದೆ. ಉಳಿದಂತೆ ಸತೀಶ್ ಶೈಲ್, ಮಾಂಕಾಳವೈದ್ಯ, ಸುಬ್ಬಾರೆಡ್ಡಿ, ಕೋಲಾರದ ಮಂಜುನಾಥ್, ಕೆಜೆಪಿಯ ಬಿ.ಆರ್.ಪಾಟೀಲ್, ಬಿಎಸ್ಆರ್ ಕಾಂಗ್ರೆಸ್ನ ನಾಗೇಂದ್ರ ಕಾಂಗ್ರೆಸ್ ಜತೆಗಿದ್ದಾರೆ.
ಒಟ್ಟು 7 ಮಂದಿ ಪಕ್ಷೇತರರು ಸೇರಿ ಕಾಂಗ್ರೆಸ್ನ ಸಂಖ್ಯಾಬಲ 136ರಷ್ಟಿರುವುದರಿಂದ ಮೂರು ಸ್ಥಾನಗಳನ್ನು ಗೆಲ್ಲಲು ಯಾವುದೇ ಆತಂಕ ಇಲ್ಲ. ಆದರೂ ಮುಂಜಾಗ್ರತೆಯಾಗಿ ಒಂದೆರಡು ಹೆಚ್ಚುವರಿ ಮತಗಳನ್ನು ಹಾಕಿಸಲು ಕಾಂಗ್ರೆಸ್ ಪಕ್ಷ ಜೆಡಿಎಸ್ ಬುಟ್ಟಿಗೆ ಕೈ ಹಾಕಿದೆ.
ಜೆಡಿಎಸ್ ಅಭ್ಯರ್ಥಿ ಫಾರೂಕ್ ಅಬ್ದುಲ್ಲಾ ಅವರನ್ನು ಗೆಲ್ಲಿಸಲು ಇನ್ನೂ 8 ಮತಗಳ ಅಗತ್ಯವಿರುವುದರಿಂದ ಜೆಡಿಎಸ್ ಪಕ್ಷೇತರ ಶಾಸಕರ ಮೇಲೆ ಕಣ್ಣಿಟ್ಟಿದ್ದು, ಮಾತುಕತೆಗಳು ನಡೆಯುತ್ತಿವೆ.
14ನೇ ವಿಧಾನಸಭೆಯ ಅಂತಿಮ ಹಂತದ ರಾಜ್ಯಸಭೆ ಚುನಾವಣೆ ಆಗಿರುವುದರಿಂದ ಎಲ್ಲಾ ಶಾಸಕರು ಹಲವಾರು ನಿರೀಕ್ಷೆಗಳೊಂದಿಗೆ ಚುನಾವಣೆ ಅಭ್ಯರ್ಥಿಗಳನ್ನು ಎದುರು ನೋಡುತ್ತಿದ್ದಾರೆ.
ಫಾರೂಕ್ ಅಬ್ದುಲ್ಲಾ ಅವರು ನಾಮಪತ್ರವನ್ನು ಹಿಂಪಡೆಯದೇ ಹೋದರೆ ಚುನಾವಣೆ ಅನಿವಾರ್ಯವಾಗಲಿದೆ. ನಂತರದ ಬೆಳವಣಿಗೆಗಳಲ್ಲಿ ರಾಜಕೀಯ ಮೇಲಾಟಗಳು, ಕುದುರೆ ವ್ಯಾಪಾರಗಳು ಯಥೇಚ್ಚವಾಗಿ ನಡೆಯುವ ನಿರೀಕ್ಷೆ ಇದೆ.