ನವದೆಹಲಿ, ಜ.8 (ಪಿಟಿಐ)- ಭಾರತದ ಪ್ರತಿಷ್ಠಿತ ವೈಮಾಂತರಿಕ್ಷ ಸಂಸ್ಥೆ ಹಿಂದುಸ್ತಾನ್ ಏರೋನಾಟಿಕ್ಸ್(ಎಚ್ಎಎಲ್)ಗೆ ಬಾಕಿ ಹಣ ಬಿಡುಗಡೆ ಮಾಡದಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧಿಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ರಫೇಲ್ ಜೆಟ್ ವಿಮಾನ ಪೂರೈಸದಿರುವ ಫ್ರಾನ್ಸ್ನ ಡಸ್ಸೌಲ್ಟ್ ಸಂಸ್ಥೆಗೆ 20,000 ಕೋಟಿ ರೂ.ಗಳನ್ನು ನೀಡಿದೆ. ಆದರೆ ದೇಶದ ಪ್ರತಿಷ್ಠಿತ ಸಂಸ್ಥೆ ಎಚ್ಎಎಲ್ಗೆ ನೀಡಬೇಕಿರುವ ಬಾಕಿ ಹಣವನ್ನು ಇನ್ನೂ ಪಾವತಿಸಿಲ್ಲ ಎಂದು ಟೀಕಿಸಿದ್ದಾರೆ.
ಎಚ್ಎಎಲ್ ಸಂಸ್ಥೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಅವರ ಉದ್ಯೋಗಿಗಳಿಗೆ ಹಣ ನೀಡಲು ಈ ಸಂಸ್ಥೆ 1,000 ಕೋಟಿ ರೂ. ಸಾಲ ಮಾಡುವಂತಾಗಿದೆ ಎಂದು ರಾಹುಲ್ ಹೇಳಿದ್ದಾರೆ.
ಒಂದೇ ಒಂದು ರಫೇಲ್ ಜೆಟ್ ವಿಮಾನ ಪೂರೈಸದಿರುವ ಫ್ರಾನ್ಸ್ನ ಡಸ್ಸೌಲ್ಟ್ ಸಂಸ್ಥೆಗೆ 20,000 ಕೋಟಿ ರೂ.ಗಳನ್ನು ನೀಡಿದೆ. ಆದರೆ ಎಚ್ಎಎಲ್ಗೆ ಬಾಕಿ ನೀಡಬೇಕಾದ 15,700 ಕೋಟಿ ರೂ.ಗಳು ಪಾವತಿಸದೇ ಸತಾಯಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಆರೋಪಿಸಿದರು.
ರಫೇಲ್ ಮತ್ತು ಎಚ್ಎಎಲ್ಗೆ ಸಂಬಂಧಪಟ್ಟ ನನ್ನ ಸರಳ ಪ್ರಶ್ನೆಗಳಿಗೆ ಉತ್ತರಿಸದೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದರ ಮೇಲೆ ಒಂದರಂತೆ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸುತ್ತಿದ್ದಾರೆ ಎಂದು ಅವರು ಆಪಾದಿಸಿದರು.