ಕೋಳಿಕೋಡ್(ಕಲ್ಲಿಕೋಟೆ), ಜ.8 (ಪಿಟಿಐ)- ಶಬರಿಮಲೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನವನ್ನು ಇಬ್ಬರು ಮಹಿಳೆಯರು ಪ್ರವೇಶಿಸಿದ ನಂತರ ಕೇರಳದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಇಂದು ಕೂಡ ಮುಂದುವರಿದಿದೆ.
ಕೋಳಿಕೋಡ್(ಕಲ್ಲಿಕೋಟೆ) ಜಿಲ್ಲೆಯಲ್ಲಿರುವ ಸಿಪಿಐ(ಎಂ) ಮತ್ತು ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೆ ದುಷ್ಕರ್ಮಿಗಳು ಇಂದು ಮುಂಜಾನೆ ಕಚ್ಚಾ ಬಾಂಬ್ಗಳನ್ನು ಎಸೆದು ಆತಂಕದ ವಾತಾವರಣ ಸೃಷ್ಟಿಸಿದ್ದಾರೆ. ಅದೃಷ್ಟವಶಾತ್ ಈ ಕೃತ್ಯಗಳಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಸಿಪಿಐ(ಎಂ)ನ ಕೊಯಿಲಾಂಡಿ ಪ್ರದೇಶ ಸಮಿತಿ ಸದಸ್ಯರ ಶೀಜು ಅವರ ಮನೆ ಮೇಲೆ ದುಷ್ಕರ್ಮಿಗಳು ಕಚ್ಚಾಬಾಂಬ್ ಎಸೆದು ಪರಾರಿಯಾದರು. ಇದಾದ ನಂತರ ಸ್ಥಳೀಯ ಬಿಜೆಪಿ ನಾಯಕ ವಿ.ಕೆ.ಮುಕುಂದನ್ ಅವರ ಮನೆ ಮೇಲೂ ನಾಡಬಾಂಬ್ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗಳ ನಂತರ ಅಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದರು.
ಮೊನ್ನೆ ಕಣ್ಣೂರಿನ ತಲಸ್ಸೇರಿಯಲ್ಲಿರುವ ಬಿಜೆಪಿ ಸಂಸದ ವಿ.ಮುರುಳೀಧರನ್, ಸಿಪಿಐ(ಎಂ) ಶಾಸಕ ಶಂಶೀರ್ ಮತ್ತು ಅದೇ ಪಕ್ಷದ ಮುಖಂಡ ಶಶಿ ಅವರ ಮನೆಗಳ ಮೇಲೆ ದುಷ್ಕರ್ಮಿಗಳು ಬಾಂಬ್ಗಳನ್ನು ಎಸೆದಿದ್ದರು. ಬಾಂಬ್ ಸ್ಫೋಟದಿಂದ ಕೆಲವರಿಗೆ ಗಾಯಗಳಾಗಿತ್ತು.
ಕೆಲವೆಡೆ ಬಿಜೆಪಿ, ಆರ್ಎಸ್ಎಸ್ ಮತ್ತು ಎಡಪಕ್ಷಗಳ ಕಚೇರಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು.