ನವದೆಹಲಿ: ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿಗೆ ಶೇಕಡ 10 ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯ ಮುಂದೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಇರಿಸಿದೆ. ಈ ಬಗ್ಗೆ ಕೇಂದ್ರ ಮಂತ್ರಿ ಮಂಡಲ ಸೋಮವಾರ ಒಮ್ಮತದ ನಿರ್ಧಾರ ತಳೆದಿತ್ತು. ಕೇಂದ್ರದ ಈ ನಿರ್ಧಾರಕ್ಕೆ ಪರ ಮತ್ತು ವಿರೋಧದ ಕೂಗು ಕೇಳಿಬಂದಿದ್ದವು.
ವಿಪಕ್ಷಗಳಾದ ಕಾಂಗ್ರೆಸ್, ಬಿಎಸ್ಪಿ, ಎಸ್ಪಿ ಮುಂತಾದ ಪಕ್ಷಗಳು ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗೆ ಶೇಕಡ 10 ಮೀಸಲಾತಿ ನೀಡುವ ನಿರ್ಧಾರ ಕೇವಲ ರಾಜಕೀಯ ತಂತ್ರ ಎಂದು ಜರೆದಿತ್ತು. ಜತೆಗೆ ಸಾಂವಿಧಾನಿಕ ಮಸೂದೆಯನ್ನು ಸಂಸತ್ ಮುಂದಿಡುವಂತೆ ಸವಾಲು ಹಾಕಿತ್ತು. ಇಲ್ಲವಾದಲ್ಲಿ ಇದೊಂದು ಚುನಾವಣಾ ತಂತ್ರ ಎಂಬುದನ್ನು ಒಪ್ಪಿಕೊಳ್ಳುವಂತೆ ಹೇಳಿತ್ತು. ಈಗ ಕೇಂದ್ರ ಸರ್ಕಾರ ನಿರೀಕ್ಷೆಯಂತೆ ಸಾಂವಿಧಾನಿಕ ಮಸೂದೆಯನ್ನು ಸಂಸತ್ನ ಮುಂದಿರಿಸಿದೆ.
ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಬಹುಮತವಿದ್ದು, ಮಸೂದೆಯನ್ನು ಅಂಗೀಕಾರ ಮಾಡುವುದು ಸುಲಭ. ಆದರೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಬಹುಮತ ಹೊಂದಿತ್ತು, ಮಸೂದೆ ಜಾರಿಯಾಗಬೇಕಾದರೆ ವಿರೋಧ ಪಕ್ಷಗಳ ಸಹಾಯ ಕೇಂದ್ರಕ್ಕೆ ಬೇಕು. ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ರಾಜಕೀಯ ನಾಯಕರು ಮಸೂದೆಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲೂ ಮೀಸಲಾತಿ ಮಸೂದೆಗೆ ಅಂಗೀಕಾರ ಸಿಗಲಿದೆಯಾ ಎಂದು ಕಾದು ನೋಡಬೇಕಿದೆ.