ಮೇಲ್ಜಾತಿಯ ಹಿಂದುಳಿದವರಿಗೆ ಶೇ.10 ಮೀಸಲಾತಿ ನಿರ್ಧಾರಕ್ಕೆ ಹೆಚ್.ಡಿ.ದೇವೇಗೌಡ ಬೆಂಬಲ

ನವದೆಹಲಿ: ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ.10 ಮಿಸಲಾತಿ ಒದಗಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬೆಂಬಲ ಸೂಚಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ಮಿಸಲಾತಿ ನಿಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಜೆಡಿಎಸ್ ಬೆಂಬಲಿಸುತ್ತದೆ. ನಾವೆಂದೂ ಸಮಾಜದ ದುರ್ಬಲ ವರ್ಗಗಳ ಏಳಿಗೆಗಾಗಿ, ಸುಧಾರಣೆಗಾಗಿ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶೇ. 10 ಮೀಸಲಾತಿ ನೀಡುವ ಮಹತ್ವದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸೋಮವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕೈಗೊಂಡಿತ್ತು. ಅದರಂತೆ ವರ್ಷಕ್ಕೆ 8 ಲಕ್ಷಕ್ಕೂ ಕಡಿಮೆ ಆದಾಯ ಇರುವ ಎಲ್ಲ ಮೇಲ್ಜಾತಿಯವರಿಗೆ ಶೇ.10 ಮೀಸಲಾತಿ ಲಭ್ಯವಾಗಲಿದೆ. ಅಷ್ಟೇ ಅಲ್ಲದೆ, 5 ಹೆಕ್ಟೇರ್​ಗಿಂತ ಕಡಿಮೆ ಕೃಷಿಭೂಮಿ ಹೊಂದಿರಬೇಕು, 1,000 ಚದರ ಅಡಿಗಿಂತ ಹೆಚ್ಚು ವ್ಯಾಪ್ತಿಯ ಮನೆ ಇರಬಾರದು, 109 ಯಾರ್ಡ್​ಗಿಂತ ದೊಡ್ಡ ವಸತಿ ಸ್ಥಳವನ್ನು ನಿಗದಿತ ಪಾಲಿಕೆ ವ್ಯಾಪ್ತಿಯಲ್ಲಿ ಹೊಂದಿರಬಾರದು, ನಿಗದಿಯಾಗದ ಪಾಲಿಕೆಯ ವ್ಯಾಪ್ತಿಯಲ್ಲಿ 209 ಯಾರ್ಡ್​ಗಿಂತ ಹೆಚ್ಚು ವಸತಿ ಸ್ಥಳ ಹೊಂದಿರಬಾರದು ಎಂಬ ನಿಯಮಗಳನ್ನು ಕೇಂದ್ರ ಸರ್ಕಾರ ವಿಧಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ