ಕೇರಳ ಹಿಂಸಾಚಾರ, ರಫೇಲ್ ಒಪ್ಪಂದ, ಮೇಕೆದಾಟು ವಿವಾದ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಸದನದಲ್ಲಿ ಮತ್ತೆ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲ

ನವದೆಹಲಿ, ಜ.7- ಕೇರಳ ಹಿಂಸಾಚಾರ, ರಫೇಲ್ ಒಪ್ಪಂದ, ಮೇಕೆದಾಟು ವಿವಾದ ಸೇರಿದಂತೆ ಪ್ರಮುಖ ವಿಷಯಗಳು ಸಂಸತ್‍ನ ಉಭಯ ಸದನಗಳ ಇಂದು ಕೂಡ ಮತ್ತೆ ಪ್ರತಿಧ್ವನಿಸಿ ಭಾರೀ ಗದ್ದಲ-ಕೋಲಾಹಲದ ವಾತಾವರಣಕ್ಕೆ ಕಾರಣವಾಯಿತು.

ಈ ವಿಷಯಗಳನ್ನು ಮುಂದಿಟ್ಟುಕೊಂಡು ವಿವಿಧ ಪಕ್ಷಗಳು ಭಾರೀ ಪ್ರತಿಭಟನೆ, ಧರಣಿ ನಡೆಸಿದ್ದರಿಂದ ಉಭಯ ಸದನಗಳ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಲೋಕಸಭೆ ಇಂದು ಬೆಳಗ್ಗೆ 11 ಗಂಟೆಗೆ ಸಮಾವೇಶಗೊಂಡು ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಎಂದಿನಂತೆ ತಮ್ಮ ತಮ್ಮ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿ ಗದ್ದಲ ಸೃಷ್ಟಿಸಿದವು.

ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಬೇರೆ ವಿಷಯಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯಬೇಕಿದೆ. ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದರು.

ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಾನಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿದ ನಂತರ ಕೇರಳ ರಾಜ್ಯದಲ್ಲಿ ಉಲ್ಬಣಗೊಂಡ ಹಿಂಸಾಚಾರದ ಬಗ್ಗೆ ಎಡಪಕ್ಷಗಳು ಪ್ರತಿಭಟಿಸಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡವು.

ರಫೇಲ್ ಫೈಟರ್ ಜೆಟ್ ವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಸದಸ್ಯರು ಇದೇ ವೇಳೆ ಬಿಗಿಪಟ್ಟು ಮುಂದುವರಿಸಿದರು.

ಇದೇ ವೇಳೆ ಎಐಎಡಿಎಂಕೆ, ಡಿಎಂಕೆ, ಟಿಡಿಪಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿ ಪ್ರತಿಭಟನೆ, ಧರಣಿ ನಡೆಸಿದವು.

ಕರ್ನಾಟಕದ ಮೇಕೆದಾಟು ಅಣೆಕಟ್ಟು ಪ್ರಸ್ತಾವನೆ ಮೂಲಕ ತಮಿಳುನಾಡಿನ ರೈತರಿಗೆ ಸಂಕಷ್ಟ ಪರಿಸ್ಥಿತಿ ಉಂಟುಮಾಡಿದೆ ಎಂದು ಡಿಎಂಕೆ ಮತ್ತು ಎಐಎಡಿಎಂಕೆ ಸದಸ್ಯರು ಪ್ರತಿಭಟಿಸಿದರು.

ಆಂಧ್ರ ಪ್ರದೇಶಕ್ಕೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಟಿಡಿಪಿ ಸದಸ್ಯರು ಗದ್ದಲ ಮುಂದುವರಿಸಿದರು.

ಅಖಿಲೇಶ್ ಯಾದವ್ ಅವರು ಗಣಿ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ಸಿಬಿಐ ತನಿಖೆ ಉದ್ದೇಶಪೂರ್ವಕ ಎಂದು ಸಮಾಜವಾದಿ ಪಕ್ಷದ ಸದಸ್ಯರು ಆರೋಪಿಸಿ ಗದ್ದಲ ಸೃಷ್ಟಿಸಿದರು.

ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಟಿಡಿಪಿ ಸದಸ್ಯರು ಯಥಾಪ್ರಕಾರ ಪ್ರತಿಭಟನೆ ಮುಂದುವರಿಸಿದರು.

ಪ್ರತಿಪಕ್ಷಗಳ ಸದಸ್ಯರು ಲೋಕಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳಕ್ಕೆ ದಾವಿಸಿ ಘೋಷಣೆ ಕೂಗುತ್ತ ಧರಣಿ ನಡೆಸಿ ಕೋಲಾಹಲದ ವಾತಾವರಣ ಸೃಷ್ಟಿಸಿದರು.
ಪ್ರತಿಭಟನಾ ನಿರತರನ್ನು ಸಮಾಧಾನಗೊಳಿಸಲು ಯತ್ನಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ನಂತರ ಸದನ ಸಮಾವೇಶಗೊಂಡಾಗಲೂ ಇದೇ ಪರಿಸ್ಥಿತಿ ಮುಂದುವರೆದು ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ರಾಜ್ಯಸಭೆಯಲ್ಲಿ ಕೋಲಾಹಲ: ರಾಜ್ಯಸಭೆಯಲ್ಲಿ ಕೇರಳ ಹಿಂಸಾಚಾರ, ರಫೇಲ್ ಒಪ್ಪಂದ, ಉತ್ತರ ಪ್ರದೇಶದ ಗಣಿಗಾರಿಕೆ, ಮೇಕೆದಾಟು ವಿವಾದವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಸದಸ್ಯರು ಪ್ರಸ್ತಾಪಿಸಿ ಗದ್ದಲ ಸೃಷ್ಟಿಸಿದರು.

ಸುಗಮ ಕಲಾಪ ನಡೆಯಲು ಅವಕಾಶ ನೀಡಿ. ಪ್ರಶ್ನೋತ್ತರ ಕಲಾಪದ ನಂತರ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಚರ್ಚಿಸಬಹುದು ಎಂದು ಸಭಾಪತಿ ವೆಂಕಯ್ಯನಾಯ್ಡು ಪ್ರತಿಭಟನಾನಿರತ ಸದಸ್ಯರಲ್ಲಿ ಪುನರಾವರ್ತಿತ ಮನವಿ ಮಾಡಿದರು.

ಪ್ರತಿಭಟನಾ ನಿರತ ಎಡಪಕ್ಷಗಳು, ಕಾಂಗ್ರೆಸ್, ಎಐಎಡಿಎಂಕೆ, ಡಿಎಂಕೆ, ಟಿಡಿಪಿ, ಸಮಾಜವಾದಿ ಪಕ್ಷದ ಸದಸ್ಯರಿಗೆ ಪುನರಾವರ್ತಿತ ಮನವಿ ಮಾಡಿದ ಸಭಾಪತಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ