ಚಂದ್ರಬಾಬು ನಾಯ್ಡು ಟಿಡಿಪಿ ಸಂಸ್ಥಾಪಕ ಎನ್.ಟಿ.ರಾಮರಾವ್ ಅವರ ಮೌಲ್ಯಗಳಿಗೆ ದ್ರೋಹ ಬಗೆದಿದ್ದಾರೆ : ಪ್ರಧಾನಿ ಮೋದಿ

ನವದೆಹಲಿ, ಜ.7-ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ನಾಯ್ಡು ಅವರು ಟಿಡಿಪಿ ಸಂಸ್ಥಾಪಕ ಎನ್.ಟಿ.ರಾಮರಾವ್ ಅವರ ಮೌಲ್ಯಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಡಿಯೋ ಕಾನ್ಫೆರೆನ್ಸ್ ಮೂಲಕ ಆಂಧ್ರ ಪ್ರದೇಶದ ಬೂತ್‍ಮಟ್ಟದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಎನ್‍ಟಿಆರ್ ಅವರು ಕಾಂಗ್ರೆಸ್ ವಿರೋಧಿ ರಾಷ್ಟ್ರೀಯ ರಂಗ ಸ್ಥಾಪಿಸುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಆಂದೋಲನ ಮಾಡಿದ್ದವರು. ಆದರೆ ಈಗ ಈ ಪಕ್ಷದ ಸಾರಥ್ಯ ವಹಿಸಿರುವ ಚಂದ್ರಬಾಬು ನಾಯ್ಡು ಅಧಿಕಾರಕ್ಕಾಗಿ ಕಾಂಗ್ರೆಸ್ ಜತೆ ಕೈಜೋಡಿಸುವ ಮೂಲಕ ಎನ್‍ಟಿಆರ್ ಅವರ ತತ್ವಾದರ್ಶಗಳನ್ನು ಮಣ್ಣುಪಾಲು ಮಾಡಿ, ದ್ರೊಹ ಬಗೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರದ ಟ್ಯಾಗ್‍ಲೈನ್ ಸನ್‍ರೈಸ್ ಎಪಿ ಮುಖ್ಯವಲ್ಲ, ತಮ್ಮ ಮಗನ ಏಳಿಗೆ ಅರ್ಥಾತ್ ಸನ್ ರೈಸ್ ಮುಖ್ಯವಾಗಿದೆ. ರಾಜ್ಯದ ಬೇರೆ ಮಕ್ಕಳು ಅವರಿಗೆ ಬೇಕಿಲ್ಲ, ಎಂದು ಪ್ರಧಾನಿ ಮೋದಿ ಆಂಧ್ರ ಸಿಎಂಗೆ ಟಾಂಗ್ ಕೊಟ್ಟರು.

¿ತೆಲುಗರ ಸ್ವಾಭಿಮಾನದ ಪ್ರತೀಕದಂತಿದ್ದ ಎನ್‍ಟಿಆರ್ ಸ್ವರ್ಣ ಆಂಧ್ರ ಪ್ರದೇಶದ ಕನಸು ಕಂಡಿದ್ದರು. ಆಂಧ್ರದ ಪ್ರತಿಯೊಬ್ಬ ಪ್ರಜೆಗೂ ರಾಜ್ಯದ ಅಭಿವೃದ್ಧಿಯ ಫಲ ದೊರೆಯಬೇಕೆಂದು ಬಯಸಿ ಆ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸಿದ್ದರು. ಆದರೆ ನಾಯ್ಡು ಕುಟುಂಬ ಅದೆಲ್ಲವನ್ನೂ ಹಾಳುಗೆಡವಿತು. ಎನ್‍ಟಿಆರ್ ಅವರಿಗೆ ದ್ರೊಹ ಬಗೆದ ನಾಯ್ಡು ಅವರಿಂದ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ ಎಂದು ಟೀಕಿಸಿದರು.

ಆಂಧ್ರದ ಮುಖ್ಯಮಂತ್ರಿಯಾಗಿ ವಿಫಲಗೊಂಡಿರುವ ಚಂದ್ರಬಾಬು ನಾಯ್ಡು ಅವರು ಈಗ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಪ್ರಧಾನಿ ಲೇವಡಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ