ಹೊಸದಿಲ್ಲಿ: ರಸ್ತೆಗಳ ಅಭಿವೃದ್ಧಿಗೆ ಡಾಂಬರ್ ಬದಲು ಕಾಂಕ್ರೀಟ್ ಬಳಸಲು ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಇದರಿಂದ ೧೫೦-೨೦೦ ವರ್ಷಗಳವರೆಗೆ ರಸ್ತೆ ಮೇಲೆ ಒಂದೇ ಒಂದು ರಸ್ತೆ ಗುಂಡಿ ಕಾಣಲು ಸಹ ಸಿಗುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾನುವಾರ ಹೇಳಿದ್ದಾರೆ.
ಪಂಜಾಬಿನ ಜೋಧ್ ಪುರ ಗಡಿ ಭಾಗದಲ್ಲಿ ಸುಮಾರು ೬ ಸಾವಿರ ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ರಸ್ತೆಗಳು ದೀರ್ಘ ಬಾಳಿಕೆ ಬರುವುದರಿಂದ, ನಿಮ್ಮ ಮಕ್ಕಳು ಸಹ ಇದೇ ರಸ್ತೆ ಬಳಸಬಹುದು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ದೇಶಾದ್ಯಂತ ರಸ್ತೆ ನಿರ್ಮಾಣದ ಜತೆಗೆ ರಸ್ತೆ ಗುಣಮಟ್ಟ, ಮಿತವ್ಯಯ, ಹಣದ ಉಳಿಕೆ, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವುದು ಗುರಿಯಾಗಿದೆ ಎಂದು ಹೇಳಿದ್ದಾರೆ.
ಸಾರಿಗೆ ಸಚಿವಾಲಯದಿಂದ ಬರೋಬ್ಬರಿ ೧೦ ಲಕ್ಷ ರೂಪಾಯಿ ರಸ್ತೆ ಅಭಿವೃದ್ಧಿಗೆ ಮೀಸಲಿರಿಸಿದೆ. ಇದರಲ್ಲಿ ಪ್ರತಿಯೊಂದು ರೂಪಾಯಿಯೂ ಸರಿಯಾದ ಮಾರ್ಗದಲ್ಲಿ ಖರ್ಚಾಗಬೇಕು. ಒಂದೇ ಒಂದು ರೂಪಾಯಿ ಅಕ್ರಮ ನಡೆಯಬಾರದು. ಗುತ್ತಿಗೆದಾರರು ನಿಷ್ಠೆಯಿಂದ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದರು.
ದೇಶದಲ್ಲಿ ಆಗಾಗ ಉಂಟಾಗುವ ಇಂ‘ನ ಸಮಸ್ಯೆ ನಿವಾರಿಸಲು ಜೈವಿಕ ಇಂಧನ ಉತ್ಪಾದನೆ, ಕೃಷಿ ತ್ಯಾಜ್ಯದಿಂದ ಎಥೆನಾಲ್ ಉತ್ಪಾದನೆ, ಸೌರ ಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸಲು ಮುಂದಡಿ ಇಡಲಾಗಿದೆ. ಅದೇ ರೀತಿ ಜೈವಿಕ ತಂತ್ರಜ್ಞಾನ ಬಳಸಿ ರೈತರು ಜೈವಿಕ ಇಂ‘ನ ಉತ್ಪಾದಿಸುವತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಆರು ಸಾವಿರ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯಲ್ಲಿ ನಾಲ್ಕು ಸಾವಿರ ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗೆ ಚಾಲನೆ ನೀಡಿದರೆ, ಎರಡು ಸಾವಿರ ಕೋಟಿ ರೂ. ಮೌಲ್ಯದ ರಸ್ತೆಗಳನ್ನು ಲೋಕಾರ್ಪಣೆ ಮಾಡಿದರು.