ಆಧಾರ್ ಆರ್ಥಿಕತೆಯ ಗೇಮ್‌ಚೇಂಜರ್ ಎಂದ ಜೇಟ್ಲಿ

ಹೊಸದಿಲ್ಲಿ: ದೇಶದಲ್ಲಿ ಗುರುತಿನ ಚೀಟಿ ಆಗಿದ್ದ ಆಧಾರ್ ಕಾರ್ಡ್‌ಅನ್ನು ಸರ್ಕಾರದ ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ಲಿಂಕ್ ಮಾಡಿಸಿದ್ದು, ಕಡ್ಡಾಯಗೊಳಿಸಿದ್ದು ಈಗ ಸಕಾರಾತ್ಮಕ ಪರಿಣಾಮ ಬೀರಿದೆ, ಇದೊಂದು ಗೇಮ್ ಚೇಂಜರ್ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಈ ಕುರಿತು ಫೇಸ್‌ಬುಕ್ ಮಾಹಿತಿ ನೀಡಿರುವ ಜೇಟ್ಲಿ, ಆಧಾರ್ ಬಳಕೆಯಿಂದ ದೇಶದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ಉಳಿತಾಯವಾಗಿದೆ. ಈ ಉಳಿಕೆ ಹಣದಿಂದ ಆಯುಷ್ಮಾನ್ ಭಾರತ್‌ನಂತಹ ಮೂರು ಬೃಹತ್ ಯೋಜನೆ ಜಾರಿಗೊಳಿಸಬಹುದು ಎಂದು ಹೇಳಿದ್ದಾರೆ.

ಯುಪಿಎ ಸರ್ಕಾರದ ಅವಯಲ್ಲಿ ಆಧಾರ್ ಜಾರಿಗೊಳಿಸಿದರೂ, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಲು ಆಗಿರಲಿಲ್ಲ. ಹಾಗಾಗಿ ನಕಲಿ ಆಧಾರ್‌ಗಳು ಸೃಷ್ಟಿಯಾಗಿದ್ದವು. ಆದರೆ ಎನ್‌ಡಿಎ ಸರ್ಕಾರವು ಕಾನೂನು ರಚಿಸಿ, ನಿಯಮ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ನಕಲಿ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ವಿವರಿಸಿದ್ದಾರೆ.

ನಕಲಿ ಆಧಾರ್ ಕಾರ್ಡ್‌ಗಳ ನಿಷ್ಕ್ರಿಯಗೊಳಿಸುವಿಕೆ, ಇವುಗಳನ್ನು ಬಳಸಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಅಕ್ರಮವಾಗಿ ಪಡೆಯುವುದು ಸೇರಿ ಹಲವು ಕ್ರಮ ಕೈಗೊಂಡ ಕಾರಣ ಮಾರ್ಚ್ ೨೦೧೮ರ ವೇಳೆಗೆ ಕೇಂದ್ರ ಸರ್ಕಾರಕ್ಕೆ ೯೦ ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆಧಾರ್ ಕಾರ್ಡ್ ಜಾರಿಗೊಳಿಸಿದ್ದು ನಾವೇ ಎಂದು ಯುಪಿಎ ಬಡಾಯಿ ಕೊಚ್ಚಿಕೊಳ್ಳುತ್ತದೆ. ಆದರೆ, ಆಧಾರ್‌ಅನ್ನು ಜನರಿಗೆ ಹೇಗೆ ಉಪಯೋಗವಾಗುವಂತೆ ಮಾಡಿ ತೋರಿಸಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ. ಇದರಿಂದ ಸರ್ಕಾರದ ಯೋಜನೆಯ ಹಣವು ಜನರ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ. ಈ ತಂತ್ರಜ್ಞಾನವು ಅಂತಾರಾಷ್ಟ್ರೀಯವಾಗಿ ಭಾರತದಲ್ಲಿ ಮಾತ್ರ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.

ದೇಶದ ಜನರಿಗೆ ಸಬ್ಸಿಡಿ ಹಣ ವರ್ಗಾವಣೆ ಮಾಡಲು ಆಧಾರ್ ಕಾರ್ಡ್ ಸಹಕಾರಿಯಾಗಿದೆ. ಇದುವರೆಗೆ ಸರ್ಕಾರವು ಜನರಿಗೆ ಆಧಾರ್ ಪರಿಗಣನೆಗೆ ತೆಗೆದುಕೊಂಡು ೧.೬೯ ಲಕ್ಷ ಕೋಟಿ ರೂ. ವರ್ಗಾವಣೆ ಮಾಡಿದೆ.

ಆಧಾರ್ ಸುಧಾರಣೆಗಾಗಿ ಕೇಂದ್ರ ಸರ್ಕಾರವು ೨೦೧೬ರಲ್ಲಿ ಆಧಾರ್ ಮಸೂದೆಗೆ ಅಂಗೀಕಾರ ನೀಡಿ ಕಾಯ್ದೆ ರೂಪಿಸಿದ ಈ ೨೮ ತಿಂಗಳಲ್ಲಿ ೧೨೨ ಕೋಟಿ ಆಧಾರ್ ಸಂಖ್ಯೆ ನೋಂದಣಿ ಮಾಡಲಾಗಿದೆ. ಅದರಲ್ಲೂ ದೇಶದಲ್ಲಿರುವ ೧೮ ವರ್ಷದ ಯುವಕರಲ್ಲಿ ಶೇ.೯೯ರಷ್ಟು ಜನರಿಗೆ ಆಧಾರ್ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪಾಹಲ್ ಹಾಗೂ ಉಜ್ವಲ ಯೋಜನೆ ಅನ್ವಯ ಅಡುಗೆ ಸಿಲಿಂಡರ್ ಗ್ಯಾಸ್ ಖರೀದಿಗೆ ಆಧಾರ್ ಲಿಂಕ್ ಹೊಂದಿರುವ ಬ್ಯಾಂಕ್‌ಗಳಿಗೆ ನೇರವಾಗಿ ೨೨.೮೦ ಕೋಟಿ ರೂ. ಸಬ್ಸಿಡಿ ಹಣ ವರ್ಗಾಯಿಸಲಾಗಿದೆ. ಇದೇ ರೀತಿ, ೫೮.೨೪ ಕೋಟಿ ರೇಷನ್ ಕಾರ್ಡ್ ಹೊಂದಿದವರು ಹಾಗೂ ನರೇಗಾ ಕಾರ್ಡ್ ಇರುವವರಿಗೆ ನೇರವಾಗಿ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ವಿಶ್ವಬ್ಯಾಂಕ್ ವರದಿ ಉಲ್ಲೇಖ

ಆಧಾರ್ ಕಾರ್ಡ್ ಬಳಕೆಯಿಂದ ಹೇಗೆ ಹಣ ಉಳಿತಾಯವಾಗುತ್ತದೆ ಎಂಬ ಕುರಿತು ವಿಶ್ವಸಂಸ್ಥೆಯ ಡಿಜಿಟಲ್ ಡೆವಿಡೆಂಡ್ ವರದಿ ಉಲ್ಲೇಖಿಸಿರುವ ಅರುಣ್ ಜೇಟ್ಲಿ, ವರದಿ ಅನ್ವಯ ಭಾರತ ಸರ್ಕಾರಕ್ಕೆ ಪ್ರತಿವರ್ಷ ೭೭ ಸಾವಿರ ಕೋಟಿ ರೂ. ಉಳಿತಾಯವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.  ಹೀಗೆ ಹಣ ಉಳಿತಾಯವಾದರೆ ಕೋಟ್ಯಂತರ ಜನರಿಗೆ ಅನುಕೂಲವಾಗುವ ಹಾಗೂ ಲಕ್ಷಾಂತರ ಕೋಟಿ ರೂ. ವೆಚ್ಚವಾಗುವ ಆಯುಷ್ಮಾನ್‌ನಂತಹ ಮೂರು ಯೋಜನೆ ಜಾರಿಗೊಳಿಸಬಹುದು ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ