ಬೆಂಗಳೂರು, ಜ.6- ನಿಗಮ ಮಂಡಳಿ ನೇಮಕಾತಿಗಾಗಿ ಪಟ್ಟಿ ರವಾನಿಸಿ 15 ದಿನ ಕಳೆದರೂ ಅಂಗೀಕರಿಸದೇ ಇರುವ ಬಗ್ಗೆ ಕಾಂಗ್ರೆಸ್ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೈತ್ರಿ ಧರ್ಮದಲ್ಲಿ ಇದನ್ನು ಒಪ್ಪಲಾಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಕಾಂಗ್ರೆಸ್ನ ಸುಮಾರು 20 ಶಾಸಕರನ್ನು ಪ್ರಮುಖ ನಿಗಮ ಮಂಡಳಿಗೆ ನೇಮಕಾತಿ ಮಾಡಲು ಶಿಫಾರಸು ಮಾಡಿ ಪಟ್ಟಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಿದ್ದು, ಅದರಲ್ಲಿ 7 ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಗೆ ಮಾತ್ರ ಅಂಗೀಕಾರ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎನ್ನಲಾಗಿದೆ.
ಉಳಿದ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಎರಡು ಪಕ್ಷಗಳ ನಡುವೆ ತಕರಾರು ಉಂಟಾಗಿದೆ.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೂ ಕಾಂಗ್ರೆಸ್ ತನ್ನ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆ ಶಿಫಾರಸು ಮಾಡಿದೆ.
ಅಷ್ಟೇ ಅಲ್ಲದೆ, ಮುಖ್ಯಮಂತ್ರಿ ಅವರಿಗೆ ರಾಜಕೀಯ ಕಾರ್ಯದರ್ಶಿಯನ್ನಾಗಿ ಕಾಂಗ್ರೆಸ್ ಶಾಸಕರನ್ನೇ ನೇಮಿಸುವಂತೆ ಶಿಫಾರಸು ಮಾಡಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಕಳುಹಿಸಿರುವ ಪಟ್ಟಿಗೆ ಅಂಗೀಕಾರ ನೀಡಿದರೆ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೂ ಅಂಗೀಕಾರ ನೀಡಬೇಕಾಗುತ್ತದೆ. ಹೀಗಾಗಿ ಕುಮಾರಸ್ವಾಮಿ ಅವರು ಯಾವ ನೇಮಕಾತಿಯನ್ನೂ ಅಂಗೀಕರಿಸದೆ ತಟಸ್ಥವಾಗಿ ಉಳಿದಿದ್ದಾರೆ.
ಈ ವೇಳೆ ಮಿತ್ರ ಪಕ್ಷಗಳ ನಡುವೆ ಕೆಲವು ಗೊಂದಲಗಳು ಏರ್ಪಟ್ಟಿದ್ದು, ಅಲ್ಲಲ್ಲಿ ಮಾತಿನ ಏಟು ಎದುರೇಟುಗಳು ಕೇಳಿ ಬರುತ್ತಿವೆ. ಈ ನಡುವೆ ಕಾಂಗ್ರೆಸ್ನ ಸುಮಾರು 20ಕ್ಕೂ ಹೆಚ್ಚು ಮಂದಿ ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಿಗಮ ಮಂಡಳಿಗಳ ನೇಮಕಾತಿ ವಿಳಂಬಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟದಲ್ಲೂ ತಮಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ. ನಿಗಮ ಮಂಡಳಿಯಲ್ಲಾದರೂ ನ್ಯಾಯ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಮುಖ್ಯಮಂತ್ರಿ ಅವರ ಮೇಲೆ ಒತ್ತಡ ತಂದು ಕೂಡಲೇ ಕಾಂಗ್ರೆಸ್ ಪಟ್ಟಿಗೆ ಸಹಿ ಹಾಕಿಸಿ ಎಂದು ಒತ್ತಾಯಿಸಿರುವುದಾಗಿ ತಿಳಿದು ಬಂದಿದೆ.
ಆದರೆ, ಜೆಡಿಎಸ್ನ ಮುಖಂಡರು ನಮ್ಮ ಪಕ್ಷದ ಶಾಸಕರನ್ನೂ ನಿಗಮ ಮಂಡಳಿಗೆ ನೇಮಿಸಿ ನಂತರ ಎಲ್ಲಾ ಪಟ್ಟಿಗೂ ಒಮ್ಮೆಲೆ ಸಹಿ ಹಾಕುವುದಾಗಿ ಉತ್ತರಿಸುತ್ತಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ನಲ್ಲಿ ಈ ವಿಳಂಬ ಸಹಿಸಿಕೊಳ್ಳುವ ಮನೋಭಾವ ಕಾಣುತ್ತಿಲ್ಲ. ಕೂಡಲೆ ನಿಗಮ ಮಂಡಳಿಗಳಿಗೆ ನೇಮಕಾತಿ ಆಗಲೇಬೇಕು. ಇಲ್ಲವಾದರೆ ಸರ್ಕಾರದ ಪತನಕ್ಕೂ ನಾವು ಹಿಂದು ಮುಂದು ನೋಡುವುದಿಲ್ಲ ಎಂಬ ನಿಷ್ಟೂರದ ಮಾತುಗಳು ಕೇಳಿ ಬರುತ್ತಿವೆ ಎನ್ನಲಾಗಿದೆ.