ಕೋಲ್ಕತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಸ್ಥಾನಕ್ಕೆ ಉತ್ತಮವಾದ ಆಯ್ಕೆ ಎಂದು ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಿಂದ ಪ್ರಧಾನಿ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದಾದರೆ ಪ್ರಧಾನ ಮಂತ್ರಿ ಆಯ್ಕೆಯನ್ನು ಪಶ್ಚಿಮ ಬಂಗಾಳದಿಂದ ಮಾಡುವುದಾದರೆ ಮಮತಾ ಬ್ಯಾನರ್ಜಿ ಉತ್ತಮ ಆಯ್ಕೆ. ಅವರಿಗೆ ಉತ್ತಮ ಅವಾಕಶವಿದೆ ಎಂದಿದ್ದಾರೆ.
ಮುಂದಿನ ಪ್ರಧಾನಿ ಆಗಬೇಕೆಂದು ಮಮತಾ ಕನಸು ಕಾಣುತ್ತಿದ್ದಾರೆ. ಆದ್ದರಿಂದ ಅವರಿಗೆ ಒಳ್ಳೆಯದಾಗಲಿ. ಆದರೆ, ನರೇಂದ್ರ ಮೋದಿ ಅವರೇ ಮುಂದಿನ ಪ್ರಧಾನಿ ಆಗಲಿದ್ದಾರೆ ಎಂಬುದು ವಾಸ್ತವದ ಸಂಗತಿ ಎಂದು ದಿಲೀಪ್ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು ಕೂಡ ಬಂಗಾಳದಿಂದ ಮೊದಲ ಪ್ರಧಾನ ಮಂತ್ರಿಯಾಗಬಹುದಿತ್ತು. ಆದರೆ, ಅದಕ್ಕೆ ಅವರ ಪಕ್ಷವೇ(ಸಿಪಿಐ-ಎಂ) ಬಿಡಲಿಲ್ಲ. ಈಗ ಬಂಗಾಳದಿಂದ ಯಾರನ್ನಾದರೂ ಆರಿಸಿದರೆ ಮಮತಾ ಅವರೇ ಮೊದಲ ಆಯ್ಕೆಯಾಗಲಿದ್ದಾರೆ ಎಂದು ಘೋಷ್ ಹೇಳಿದ್ದಾರೆ.
ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಅಭ್ಯರ್ಥಿಯಾಗುವುದನ್ನು ಮಮತಾ ಅವರು ವಿರೋಧಿಸಿದ್ದರು. ಹೇಗೆ ಮಮತಾ ಅವರು ಪ್ರಣಾಬ್ರನ್ನು ತಡೆಯಲು ಪ್ರಯತ್ನಿಸಿದರು ಎಂಬುದನ್ನು ಜನರು ಮರೆತಿಲ್ಲ ಎಂದು ಘೋಷ್ ಮಮತಾರನ್ನು ಟೀಕಿಸಿದರು.
ನಾಲ್ಕು ದಿನಗಳ ಹಿಂದಷ್ಟೇ ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಮುಖ್ಯಮಂತ್ರಿ ಮಮತಾ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಬಿಂಬಿಸಿತ್ತು. ಮಹಾಘಟಬಂಧನ್ ಅಡಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಿ ಗೆದ್ದರೆ, ಮಮತಾ ಕೂಡ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಈಗ ಇದೇ ಮೊದಲ ಬಾರಿಗೆ ಪ್ರತಿಪಕ್ಷದ ನಾಯಕನೊಬ್ಬ ಮಮತಾ ಪರ ಬ್ಯಾಟ್ ಬೀಸಿದ್ದಾರೆ ಎನ್ನಲಾಗಿದೆ.
‘Mamata Banerjee Has the Brightest Chance’: BJP’s Dilip Ghosh Pitches for Rival as Next PM