ಕೇರಳದಲ್ಲಿ ಬಾಂಬ್ ದಾಳಿ; ಕಣ್ಣೂರಿನಲ್ಲಿ ಮುಂದುವರಿದ ಹಿಂಸಾಚಾರ

ಕಣ್ಣೂರು: ಶಬರಿಮಲೆ ದೇಗುಲಕ್ಕೆ ಇಬ್ಬರು ಮಹಿಳೆಯರು ಪ್ರವೇಶದ ನಂತರ ಕೇರಳದಲ್ಲಿ ಪ್ರತಿಭಟನೆ ಮುಂದುವರೆದಿದ್ದು, ಕಣ್ಣೂರು ಬೆಂಕಿಯುಂಡೆಯಾಗಿ ಬದಲಾಗಿದೆ. ಸಿಪಿಎಂ ಮತ್ತು ಬಿಜೆಪಿ – ಆರ್ ಎಸ್ ಎಸ್ ಕಾರ್ಯಕರ್ತರ ನಡುವೆ ದಾಳಿ ನಡೆದಿದೆ. ಸಿಪಿಎಂ ಪಕ್ಷದ ಮಾಜಿ ಜಿಲ್ಲಾ ಕಾರ್ಯದರ್ಶಿ ಪಿ ಸಾಸಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಮನೆಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ.
ತಲಶ್ಯೇರಿ ಸೇರಿದಂತೆ ಮತ್ತಿತರ  ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.ರಜೆ ಮೇಲೆ ತೆರಳಿದ್ದ ಪೊಲೀಸರನ್ನು ಬೇಗ ಕರ್ತವ್ಯಕ್ಕೆ ಮರಳುವಂತೆ ಕಣ್ಣೂರು ಎಸ್ ಪಿ ಜಿ ಶಿವ ವಿಕ್ರಮ್  ಸೂಚಿಸಿದ್ದಾರೆ.
ಹಿಂಸಾಚಾರ ಉಂಟಾಗಿರುವ  ಸ್ಥಳಗಳಲ್ಲಿ ಶಾಂತಿ ಕಾಪಾಡುವಂತೆ  ಜಿಲ್ಲಾಧಿಕಾರಿ ಮಿರ್ ಮೊಹಮ್ಮದ್ ಆಲಿ ಹಾಗೂ ಎಸ್ಪಿ  ಶಿವ ವಿಕ್ರಮ್ ಮನವಿ ಮಾಡಿಕೊಂಡಿದ್ದಾರೆ. ಹಿಂಸಾಚಾರದ ಕಾರಣದಿಂದಾಗಿ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಜಿಲ್ಲೆಯ ವಿವಿಧ ಕಡೆಗಳಲ್ಲಿಯೂ ಹಿಂಸಾಚಾರ ಮುಂದುವರೆದಿದೆ. ಅಪರಿಚಿತರಿಂದ ಚೆರುತಾಜಾಮ್ ನ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಪಪ್ಪಿನಿಸೆರಿಯಾದಲ್ಲಿನ ಬಿಜೆಪಿ ನಾಯಕರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಮನೆಗೆ ಕಲ್ಲು ತೂರಿ  ಕಿಟಕಿಗಳನೆಲ್ಲಾ ಪುಡಿ ಪುಡಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಕಣ್ಣೂರು ಜಿಲ್ಲೆಯೊಂದರಲ್ಲಿಯೇ ಸಂಭವಿಸಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು 143 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 260 ಮಂದಿಯನ್ನು ಬಂಧಿಸಿದ್ದಾರೆ.  ರಾಜಕೀಯ ಪಕ್ಷಗಳ ನಾಯಕರ ಮನೆಗಳ ಮೇಲೆ ದಾಳಿ ನಡೆಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಜಿಪಿ ಬೆಹೆರಾ  ಕಣ್ಣೂರು ಎಸ್ಪಿಗೆ ಆದೇಶಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ