ವಿಧಾನಸೌಧದ ಟೈಪಿಸ್ಟ್ ಮೋಹನ್‍ ಬಳಿ ಸಿಕ್ಕಿರುವ ಹಣದ ಮೂಲ ಪತ್ತೆ ಹಚ್ಚಲು ಪೊಲೀಸರಿಂದ ತೀವ್ರ ಶೋಧನೆ

ಬೆಂಗಳೂರು, ಜ.5-ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಸಿಕ್ಕಿರುವ 25.76 ಲಕ್ಷ ಹಣದ ಮೂಲ ಪತ್ತೆ ಹಚ್ಚಲು ವಿಧಾನಸೌಧ ಠಾಣೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಸಚಿವರೊಬ್ಬರ ಕಚೇರಿಯಲ್ಲಿ ಟೈಪಿಸ್ಟ್ ಆಗಿರುವ ಮೋಹನ್‍ನನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಇಂದೂ ಸಹ ತೀವ್ರ ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ನಿನ್ನೆ ಮೋಹನ್ ಅವರನ್ನು ವಿಚಾರಣೆಗೊಳಪಡಿಸಿ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಮೋಹನ್ ಅವರು ಒಂದೊಂದು ಬಾರಿ ಒಂದೊಂದು ರೀತಿಯ ಹೇಳಿಕೆ ನೀಡಿದ್ದು, ಇವರು ನೀಡಿರುವ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ.

ಗುತ್ತಿಗೆದಾರರೊಬ್ಬರು ಈ ಹಣವನ್ನು ಮೋಹನ್ ಅವರಿಗೆ ನೀಡಿದ್ದಾರೆಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಈ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೋಹನ್ ವಿಚಾರಣೆ ಮುಗಿದ ನಂತರ ಈ ಹಣ ಯಾರಿಂದ ಬಂತು, ಯಾರಿಗೆ ತಲುಪಿಸಲಾಗುತ್ತಿತ್ತು, ಯಾವ ಕಾರಣಕ್ಕೆ ಈ ಹಣ ಕೊಡಲಾಗಿತ್ತು ಎಂಬುದು ಗೊತ್ತಾಗಲಿದೆ.

12 ವರ್ಷದಿಂದ ಕೆಲಸ:
ಟೈಪಿಸ್ಟ್ ಮೋಹನ್ ಕಳೆದ 12 ವರ್ಷಗಳಿಂದ ಮಂತ್ರಿ ಅವರುಗಳ ಬಳಿ ಕೆಲಸ ಮಾಡುತ್ತಿದ್ದರೆಂಬುದು ತಿಳಿದುಬಂದಿದ್ದು, ಪ್ರಸ್ತುತ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.

ಪ್ರಕರಣ ಎಸಿಬಿಗೆ !
ಈ ಪ್ರಕರಣವನ್ನು ಎಸಿಬಿಗೆ ವಹಿಸಲು ಬೆಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

ಇದು ಹಣ ವರ್ಗಾವಣೆ ಪ್ರಕರಣವಾಗಿರುವುದರಿಂದ ಎಸಿಬಿಗೆ ಈ ಪ್ರಕರಣ ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬೆಂಗಳೂರು ನಗರ ಪೆÇಲೀಸ್ ಅಧಿಕಾರಿಗಳು, ಡಿಜಿ ಮತ್ತು ಐಜಿಪಿ ನೀಲಮಣಿ ಎನ್.ರಾಜು ಅವರೊಂದಿಗೆ ಈ ಬಗ್ಗೆ ಚರ್ಚಿಸಿ ಇಂದು ಅಥವಾ ನಾಳೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಘಟನೆ ಹಿನ್ನೆಲೆ:
ನಿನ್ನೆ ವಿಧಾನಸೌಧದ ಪಶ್ಚಿಮ ದ್ವಾರದ ಸಮೀಪ ಬ್ಯಾಗನ್ನು ಕೊಂಡೊಯ್ಯುತ್ತಿದ್ದ ಮೋಹನ್ ಅವರನ್ನು ವಿಧಾನಸೌಧ ಭದ್ರತಾ ಸಿಬ್ಬಂದಿ ತಡೆದು ಪರಿಶೀಲಿಸಿದಾಗ ಅದರಲ್ಲಿ 25.76 ಲಕ್ಷ ರೂ. ಹಣ ಪತ್ತೆಯಾಗಿತ್ತು.

ಈ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಮೋಹನ್‍ನನ್ನು ವಶಕ್ಕೆ ತೆಗೆದುಕೊಂಡು ಹಣ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಗೊಂದಲದ ಹೇಳಿಕೆ ನೀಡಿದ್ದರು.

ಬ್ಯಾಗನ್ನು ಪರಿಶೀಲಿಸಿದಾಗ ನಾಲ್ಕು ಕವರ್‍ಗಳಲ್ಲಿ 25.76 ಲಕ್ಷ ರೂ ಇರುವುದು ಪತ್ತೆಯಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ