ಬೆಂಗಳೂರು, ಜ.5-ಮಹಾತ್ಮಗಾಂಧೀಜಿ ಅವರು ಕಲಾಭಿಮಾನಿಯಾಗಿದ್ದರು, ಅವರು ಜೀವನದ ಎಲ್ಲ ಪ್ರಾಕಾರಗಳಲ್ಲೂ ಆಸಕ್ತಿ ಹೊಂದಿದ್ದರು. ಅವರನ್ನು ನಾನು ಎರಡು ವರ್ಷದವನಿದ್ದಾಗಲೇ ನೋಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಿಳಿಸಿದರು.
ಚಿತ್ರಕಲಾ ಪರಿಷತ್ನಲ್ಲಿ ಆಯೋಜಿಸಿದ್ದ ಗಾಂಧಿ -150 ಕಲಾಪ್ರದರ್ಶನ ಮತ್ತು ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ- ಚಿತ್ರಸಂತೆ -2019 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1934 ರಲ್ಲಿ ಗಾಂಧೀಜಿ ನಮ್ಮ ತಂದೆ ನಡೆಸುತ್ತಿದ್ದ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ್ದರು. ಆ ಹಾಸ್ಟೆಲ ನಲ್ಲಿ ಇಬ್ಬರು ದಲಿತ ವಿದ್ಯಾರ್ಥಿಗಳಿದ್ದುದ್ದನ್ನು ಗಾಂಧೀಜಿ ಗುರುತಿಸಿದ್ದರು ಎಂದು ಸ್ಮರಿಸಿದ ಅವರು, ನಂತರ 1946ರಲ್ಲಿ ಗಾಂಧೀಜಿ ಅವರು ದೆಹಲಿಯಲ್ಲಿ ನೀಡುತ್ತಿದ್ದ ಉಪದೇಶವನ್ನು ನಾನು ಕೇಳುತ್ತಿದ್ದೆ ಎಂದರು.
ನಟ ರಮೇಶ್ಅರವಿಂದ್ ಬಂದಿದ್ದಕ್ಕೆ ಬಹಳ ಸಂತೋಷವಾಗಿದೆ.ನಾನು ಅವರ ಅಭಿಮಾನಿ ಎಂದು ನುಡಿದರು.
ಬಿ.ಎಲï.ಶಂಕರ್ ಅಧ್ಯಕ್ಷತೆಯಲ್ಲಿ ಚಿತ್ರಕಲಾ ಪರಿಷತ್ ಬಹಳ ಸಾಧನೆ ಮಾಡಿದೆ. ರಾಜರಾಜೇಶ್ವರಿ ನಗರದಲ್ಲಿ ಚಿತ್ರಕಲಾ ಪರಿಷತ್ನ ಶಾಖೆ ನಿರ್ಮಾಣಕ್ಕೆ ಸಿದ್ದರಾಮಯ್ಯ ಅವರು 30 ಕೋಟಿ ನೀಡಿರುವುದಕ್ಕೆ ಅಭಿನಂದನೆ ತಿಳಿಸುವುದಾಗಿ ಹೇಳಿದರು.
ನಟ ರಮೇಶ್ ಅರವಿಂದ್ ಮಾತನಾಡಿ, ನಿಮ್ಮ ಅಗತ್ಯಗಳನ್ನು ಜಗತ್ತು ಪೂರೈಸುತ್ತೆ, ದುರಾಸೆಗಳನ್ನಲ್ಲ. ಆತ್ಮಸಾಕ್ಷಿಗೆ ಮನಸಾಕ್ಷಿ ಬೇಕಿಲ್ಲ ಎಂದು ಗಾಂಧಿ ಹೇಳಿದ್ದರೆಂದು ನೆನಪಿಸಿಕೊಂಡ ಅವರು, ಗಾಂಧೀಜಿ ಹೇಳಿದ್ದನ್ನು ಯುವ ಜನರಿಗೆ ತಲುಪಿಸಲು ಚಿತ್ರ ಮಾಧ್ಯಮದ ಮಾರ್ಗಗಳು ಸುಲಭವಾಗಿವೆ ಎಂದು ಹೇಳಿದರು.
ಹಿಟ್ಲರ್ ಮತ್ತು ಗಾಂಧಿ ವಾಟ್ಸಾಪ್ ಚಾಟ್ ಮಾಡಿದರೆ ಹೇಗಿರುತ್ತದೆ. ಯುದ್ಧ ಟ್ಯಾಂಕರ್ ಮೇಲೆ ಗಾಂಧಿಯಂತೆ ಟ್ರೆಡ್ ವಿಲ್ ರೀತಿ ನಡೆಯುತ್ತಿದ್ದರೆ ಹೇಗಿರುತ್ತದೆ ಎಂಬ ಕುತೂಹಲವಿದೆ ಎಂದರು.
ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ,ಚಿತ್ರಸಂತೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು. ಆದರೆ ಆ ದಿನ ಹೆಚ್ಚು ಜನ ಸೇರುವುದರಿಂದ ಗೊಂದಲವಾಗುವುದು ಬೇಡ ಎಂದು ಹಿಂದಿನ ದಿನಗಳಲ್ಲೇ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಚಿತ್ರ ಕಲಾವಿದರಾದ ಜೆ.ಎಂ.ಎಸ್.ಮಣಿ, ಜೇಸು ರಾವಲ್, ನೀಲಾ ಪಂಚ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಐಟಿ ದಾಳಿ ಪ್ರತಿಕ್ರಿಯೆ:
ಸ್ಟಾರ್ ನಟರ ಮನೆಗಳ ಮೇಲೆ ಐಟಿ ದಾಳಿ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಸ್.ಎಂ.ಕೃಷ್ಣ ಅವರು, ಹಣಕಾಸು ಇಲಾಖೆಯ ರಾಜ್ಯ ಸಚಿವನಾಗಿದ್ದ ಸಂದರ್ಭದಲ್ಲಿ ದಾಳಿಯ ನೇತೃತ್ವವನ್ನು ನಾನು ವಹಿಸಿದ್ದೆ ಎಂದು ನೆನಪಿಸಿಕೊಂಡರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಕುರಿತಂತೆ ಅವರಿಗೆ ಏನು ಹೇಳಬೇಕೋ ಹೇಳಿದ್ದೇನೆ. ಇನ್ನೇನು ಹೇಳುವುದಿಲ್ಲ ಎಂದು ಮೌನವನ್ನೇ ಉತ್ತರವಾಗಿಸಿದರು.