ಬೆಂಗಳೂರು,ಜ.5- ಲೋಕಸಭಾ ಚುನಾವಣೆಗೆ ಸಜ್ಜುಗೊಳ್ಳುತ್ತಿರುವ ಬಿಜೆಪಿ, ಪಕ್ಷದ ವಿವಿಧ ಮೋರ್ಚಾಗಳಿಗೆ ಮೇಜರ್ ಸರ್ಜರಿ ಮಾಡಲು ನಿರ್ಧರಿಸಿದ್ದು, ನಿಷ್ಕ್ರಿಯಗೊಂಡಿರುವ ಸದಸ್ಯರಿಗೆ ಕೋಕ್ ನೀಡಿ ಹೊಸಬರಿಗೆ ಜವಾಬ್ದಾರಿ ನೀಡಲು ನಿರ್ಧರಿಸಿದೆ.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಕೆಲವು ಬದಲಾವಣೆ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನಿರ್ಧಾರ ಕೈಗೊಂಡಿದ್ದು, ಜನವರಿ 14 ರ ಬಳಿಕ ಪಕ್ಷದ ವಿವಿಧ ಮೋರ್ಚಾಗಳು, ಪದಾಧಿಕಾರಿಗಳ ಬದಲಾವಣೆಗೆ ಸಿದ್ಧತೆ ನಡೆಸಿದ್ದಾರೆ.
ನಿಷ್ಕ್ರಿಯಗೊಂಡಿರುವ ಸದಸ್ಯರ ಬದಲಾವಣೆಗೆ ತೀರ್ಮಾನಿಸಿದ್ದು, ಶೇ.40 ರಷ್ಟು ಬದಲಾವಣೆ ಮಾಡಲು ಚಿಂತನೆ ನಡೆದಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಕೆಲವು ಮೋರ್ಚಾಗಳ ಸದಸ್ಯರುಕೇವಲ ವಿಸಿಟಿಂಗ್ ಕಾರ್ಡ್‍ಗೆ ಮಾತ್ರ ಸೀಮಿತರಾಗಿದ್ದು, ಯಾವುದೇ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳಲದೆ ನಿಷ್ಕ್ರಿಯರಾಗಿದ್ದಾರೆ. ಹೋರಾಟ ರೂಪಿಸುವಲ್ಲಿ ವಿಫಲರಾಗಿದ್ದಾರೆ ಎನ್ನುವ ಕಾರಣಕ್ಕೆ ಸಕ್ರಿಯವಾಗಿರುವವರಿಗೆ ಸ್ಥಾನ ನೀಡಲು ಬಿಎಸ್‍ವೈ ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಸವದಿ ಮೇಲೂ ನಿಷ್ಕ್ರಿಯತೆ ಆರೋಪ ಕೇಳಿಬಂದಿದೆ.ಅವರು ಹೋರಾಟ ರೂಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಯಡಿಯೂರಪ್ಪಗೆ ದೂರು ಬಂದಿದ್ದು, ಹೀಗಾಗಿ ಲೋಕಸಭೆ ಚುನಾವಣೆಯೊಳಗೆ ಮೇಜರ್ ಸರ್ಜರಿ ಮಾಡಲು ಬಿಎಸ್‍ವೈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.