ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ ವಿಚಾರ ಸದ್ಯ ಚರ್ಚೆಯಲ್ಲಿದೆ. ಈ ವಿಷಯದಲ್ಲಿ ಕೇರಳಾದ್ಯಂತ ತೀವ್ರ ಪ್ರತಿಭಟನೆಯೂ ನಡೆಯುತ್ತಿದೆ. ಅಚ್ಚರಿ ಎಂದರೆ ದೇಗುಲ ಪ್ರವೇಶಕ್ಕೂ ಮೊದಲು ಈ ಮಹಿಳೆಯರು ಉಳಿದುಕೊಂಡಿದ್ದು ಕೊಡಗಿನಲ್ಲಿ ಎನ್ನುವ ವಿಚಾರ ಸಿಸಿಟಿವಿ ದೃಶ್ಯಾವಳಿಗಳಿಂದ ಸಾಬೀತಾಗಿದೆ.
ಬಿಂದು ಹಾಗೂ ಕನಕಾ ದುರ್ಗಾ ಹೆಸರಿನ ಇಬ್ಬರು ಬುಧವಾರ (ಜ.2) ಬೆಳಿಗ್ಗೆ ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಿದ್ದರು. ಇದಕ್ಕೂ ಮೊದಲು ಅಂದರೆ, ಡಿ.29ರಂದು ಇಬ್ಬರೂ ವಿರಾಜ್ಪೇಟೆಯ ದೊಡ್ಡಚೌಕಿ ಸಮೀಪದ ಸೀತಾಲಕ್ಷ್ಮಿ ಲಾಡ್ಜ್ನಲ್ಲಿ ಉಳಿದುಕೊಂಡಿದ್ದರು ಎನ್ನುವ ವಿಚಾರ ಈಗ ಬಹಿರಂಗವಾಗಿದೆ.
ಬಿಂದು ಹಾಗೂ ಕನಕಾ ಡಿ.29ರಂದು ಮಧ್ಯಾಹ್ನ 2.12ಕ್ಕೆ ಲಾಡ್ಜ್ಗೆ ಚೆಕ್ ಇನ್ ಆಗಿದ್ದರು. ನಂತರ ಎರಡು ದಿನಗಳ ಕಾಲ ಕೊಡಗು ವೀಕ್ಷಣೆಯಲ್ಲಿ ತೊಡಗಿದ್ದರು. ಇವರ ಫೋಟೋಗಳು ಟಿವಿ, ಪೇಪರ್ಗಳಲ್ಲಿ ಬರುತ್ತಿದ್ದಂತೆ ಸ್ಥಳೀಯರಿಗೆ ಇವರ ಗುರುತು ಸಿಕ್ಕಿದೆ. “ನಮ್ಮ ಲಾಡ್ಜ್ನಲ್ಲಿ ಉಳಿದುಕೊಂಡಿದ್ದ ಮಹಿಳೆಯರು ಸಾಮಾನ್ಯ ಉಡುಗೆಯನ್ನೇ ತೊಟ್ಟಿದ್ದರು. ಅವರು ಯಾವುದೇ ಮಾಲೆ ಧರಿಸಿರಲಿಲ್ಲ ಅಥವಾ ಸಾಂಪ್ರದಾಯಿಕ ಬಟ್ಟೆ ಹಾಕಿರಲಿಲ್ಲ” ಎಂದು ಲಾಡ್ಜ್ನ ಸಿಬ್ಬಂದಿ ತಿಳಿಸಿದ್ದಾರೆ.
ಯಾವುದೇ ಪೊಲೀಸ್ ಭದ್ರತೆ ಇಲ್ಲದೆ ಬಿಂದು ಹಾಗೂ ಕನಕಾ ದೇಗುಲದ ಒಳಗೆ ಸಾಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಈ ವಿಚಾರ ಅಯ್ಯಪ್ಪ ಭಕ್ತರಲ್ಲಿ ಆಕ್ರೋಶಕ್ಕೂ ಕಾರಣವಾಗಿತ್ತು. ಇತ್ತ ಮಂದಿರದ ಶುದ್ಧಿಗೆ ದೇವಸ್ಥಾನದ ಬಾಗಿಲನ್ನು ಮುಚ್ಚಿದರೆ, ಅತ್ತ ಆರ್ಎಸ್ಎಸ್ ಸೇರಿದಂತೆ ಅನೇಕ ಸಂಘಟನೆಗಳು ಪ್ರತಿಭಟನೆ ಆರಂಭಿಸಿದ್ದವು. ಈ ವೇಳೆ ಬಿಜೆಪಿ ಕಾರ್ಯಕರ್ತನೋರ್ವ ಮೃತಪಟ್ಟ ಘಟನೆಯೂ ನಡೆದಿದೆ. ಇನ್ನು, ನಿನ್ನೆ ಕೇರಳ ಬಂದ್ ನಡೆಸಲಾಯಿತು. ಈ ವೇಳೆ ಹಿಂಸಾಚಾರ ಏರ್ಪಟ್ಟ ಬಗ್ಗೆ ವರದಿ ಆಗಿದೆ.