ಜಿ.ಸಿ.ಚಂದ್ರ ಶೇಖರ್, ಡಾ.ನಾಸೀರ್ ಹುಸೈನ್, ಡಾ.ಎಲ್.ಹನುಮಂತಯ್ಯ ಕಾಂಗ್ರೆಸ್ ರಾಜ್ಯಸಭೆ ಅಭ್ಯರ್ಥಿಗಳು

ಬೆಂಗಳೂರು, ಮಾ.12- ಎಲ್ಲಾ ಲೆಕ್ಕಚಾರಗಳನ್ನು ತಲೆಕೆಳಗು ಮಾಡಿ ಕಾಂಗ್ರೆಸ್ ಹೈ ಕಮಾಂಡ್ ರಾಜ್ಯಸಭೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಪರಮೇಶ್ವರ್ ಆಪ್ತರಿಗೆ ಹೆಚ್ಚಿನ ಮಣೆ ಹಾಕಲಾಗಿದೆ. ಬಿಜೆಪಿ ಕೂಡ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ.

ಜೆಡಿಎಸ್ ಜೊತೆಗಿನ ಮೈತ್ರಿಯ ಪ್ರಸ್ತವಾವವನ್ನು ಕಾಂಗ್ರೆಸ್ ತಳ್ಳಿ ಹಾಕಿದ್ದು, ಕೊನೆಗೂ ಮೂರು ಮಂದಿ ಅಭ್ಯರ್ಥಿಗಳನ್ನು ಕಣಕಿಳಿಸುತ್ತಿದೆ. ಈ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಟಫ್ ಫೈಟ್ ನಡೆಯುವುದು ಸ್ಪಷ್ಟವಾಗಿದೆ.

ರಾಜ್ಯ ಸಭೆ ಚುನಾವಣೆಗೆ ಕಣಕ್ಕಿಳಿಸುವ ಮೂರು ಮಂದಿ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಇಂದು ಸಂಜೆ ಪ್ರಕಟಿಸಿದೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಆಪ್ತ ಜಿ.ಸಿ.ಚಂದ್ರ ಶೇಖರ್, ವಿಧಾನ ಪರಿಷತ್‍ನ ಮಾಜಿ ಸದಸ್ಯ ಹಾಗೂ ದಲಿತ ಸಮುದಾಯದ ಡಾ.ಎಲ್.ಹನುಮಂತಯ್ಯ ಅವರಿಗೆ ನೀಡಲಾಗಿದೆ. ಈ ಇಬ್ಬರು ಪಕ್ಷದ ಪದಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಚಂದ್ರಶೇಖರ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿದ್ದರೆ, ಹನುಮಂತಯ್ಯ ಉಪಾಧ್ಯಕ್ಷರಾಗಿದ್ದಾರೆ.

ಚುನಾವಣೆ ವರ್ಷವಾಗಿರುವುದರಿಂದ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂಬ ಒತ್ತಾಸೆಯ ನಡುವೆ ಮೂರನೇ ಅಭ್ಯರ್ಥಿಯನ್ನಾಗಿ ಎಐಸಿಸಿ ವಕ್ತಾರ ಡಾ.ನಾಸೀರ್ ಹುಸೈನ್ ಅವರನ್ನು ಕಣಕ್ಕಿಳಿಸಲಾಗುತ್ತಿದೆ.

ರಾಜ್ಯಸಭೆ ಸದಸ್ಯರಾಗಲು ಅಲ್ಪಸಂಖ್ಯಾತ ಸಮುದಾಯದಿಂದ ಸಲೀಂ ಅಹಮದ್, ರೋಷನ್ ಬೇಗ್, ರೆಹಮಾನ್ ಖಾನ್ ಮತ್ತಿತರರು ಸ್ಪರ್ಧೆಯಲ್ಲಿದ್ದರು. ಕೊನೆಗೆ ಎಐಸಿಸಿ ವಕ್ತಾರ ನಾಸೀರ್ ಹುಸೈನ್ ಅವರನ್ನು ಆಯ್ಕೆ ಮಾಡಲಾಗಿದೆ. ಖಾಲಿ ಇರುವ ಮೂರು ಸ್ಥಾನಗಳಲ್ಲಿ ಒಂದನ್ನು ದಲಿತ ಸಮುದಾಯಕ್ಕೆ ಮೀಸಲಿಡಲಾಗಿತ್ತು, ಅದನ್ನು ಎಡಗೈ ಸಮುದಾಯದ ಎಲ್.ಹನಮಂತಯ್ಯ ಅವರಿಗೆ ನೀಡಲಾಗಿದೆ. ಇನ್ನೊಂದನ್ನು ಲಿಂಗಾಯಿತ ಸಮುದಾಯಕ್ಕೆ ನೀಡಲಾಗುತ್ತದೆ ಎಂಬ ಲೆಕ್ಕಾಚಾರಗಳಿದ್ದವು, ಆ ಸ್ಥಾನಕ್ಕೆ ರಾಣಿಸತೀಶ್, ಕೈಲಾಸ್ ನಾಥ್ ಪಾಟೀಲ್ ಮತ್ತಿತರರು ಸ್ಪರ್ಧೆಯಲ್ಲಿದ್ದರು. ಕೊನೆಗೆ ಒಕ್ಕಲಿಗ ಸಮುದಾಯದ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ.

ತನ್ನಲ್ಲಿರುವ ಶಾಸಕರ ಸಂಖ್ಯಾಬಲ ಮತ್ತು ಏಳು ಮಂದಿ ಜೆಡಿಎಸ್‍ನ ಬಂಡಾಯ ಶಾಸಕರ ಬಲದೊಂದಿಗೆ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿದೆ. ಜೆಡಿಎಸ್ ತನಗೆ ಒಂದು ಸ್ಥಾನವನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಿತ್ತು. ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆಯ ನಂತರ ಕಾಂಗ್ರೆಸ್-ಜೆಡಿಎಸ್ ನಡುವಿನ ಸಂಬಂಧ ಇನ್ನಷ್ಟು ಹಳಸಿದ್ದು. ಬಿಬಿಎಂಪಿ ಮೈತ್ರಿ ಕಡಿದುಕೊಳ್ಳುವ ಮಾತುಗಳು ಕೇಳಿ ಬಂದಿವೆ.

ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಮುಂದಿನ ರಾಜಕೀಯ ಹೊಂದಾಣಿಕೆಯ ದೃಷ್ಟಿಯಿಂದ ಕಾಂಗ್ರೆಸ್ ಒಂದು ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್ ನಾಯಕರು ಸಲಹೆ ನೀಡಿದ್ದರು. ಆದರೆ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿದಿರುವ ಹೈಕಮಾಂಡ್ ಮೂರು ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ