ಬೆಂಗಳೂರು:ಸ್ಯಾಂಡಲ್ವುಡ್ ನಟ-ನಟಿಯರ ಮನೆ ಮೇಲಿನ ಆದಾಯ ತೆರಿಗೆ ಇಲಾಖೆಯ(ಐಟಿ) ದಾಳಿ ಇಂದು ಕೂಡ ಮುಂದುವರೆಯುತ್ತಿದೆ. ನಟ ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ಸುದೀಪ್ ಹಾಗೂ ಯಶ್ ಸೇರಿದಂತೆ ಕನ್ನಡ ಚಿತ್ರ ರಂಗದ ನಿರ್ಮಾಪಕರು, ನಟಿಯರ ಮನೆಗಳ ಮೇಲೆ ಐ.ಟಿ ಅಧಿಕಾರಿಗಳು ನಿನ್ನೆ(ಗುರುವಾರ) ಬೆಳಿಗ್ಗೆಯೇ ದಾಳಿ ನಡೆಸಿದ್ದರು. ಅಲ್ಲದೇ ಸತತವಾಗಿ ಮಧ್ಯರಾತ್ರಿವರೆಗೂ ಶೋಧಕಾರ್ಯ ನಡೆಸಿದ್ದರು.
ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು, ‘ದಿ ವಿಲನ್’ ಚಿತ್ರದ ನಿರ್ಮಾಪಕ ಹಾಗೂ ವಿಧಾನ ಪರಿಷತ್ನ ಜೆಡಿಎಸ್ ಸದಸ್ಯ ಸಿ.ಆರ್. ಮನೋಹರ್, ಮತ್ತೊಬ್ಬ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಯಶ್ ಅವರ ಪತ್ನಿ ಹಾಗೂ ನಟಿ ರಾಧಿಕಾ ಪಂಡಿತ್ ಅವರ ಪೋಷಕರ ಮನೆಗಳ ಮೇಲೂ ದಾಳಿ ಮಾಡಲಾಗಿತ್ತು. ಈ ಐಟಿ ದಾಳಿಯಿಂದ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿತ್ತು. ನಿನ್ನೆ ತಡರಾತ್ರಿಗೆ ಮುಗಿಯಲಿದೆ ಎಂದು ಭಾವಿಸಿದ್ದ ಐಟಿ ಅಧಿಕಾರಿಗಳ ಶೋಧಕಾರ್ಯ ಇಂದು ಕೂಡ ಮುಂದುವರೆದಿದೆ. ಬೆಳಿಗ್ಗೆಯೇ ನಟ-ನಟಿಯರ ಮನೆಗಳತ್ತ ಅಧಿಕಾರಿಗಳು ದೌಡಾಯಿಸಿದ್ಧಾರೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದ ಗಣ್ಯರು ಆಘಾತಕ್ಕೊಳಗಾಗಿದ್ದು, ಬಂಧನದ ಭೀತಿಯಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪುನೀತ್ ರಾಜ್ ಕುಮಾರ್: ಸದಾಶಿವನಗರದಲ್ಲಿರುವ ಪುನೀತ್ ರಾಜ್ಕುಮಾರ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಐಟಿ ಅಧಿಕಾರಿಗಳು ನಿನ್ನೆ ಮಧ್ಯರಾತ್ರಿವರೆಗೂ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದರು. ಅಲ್ಲದೇ ಕೆಲವು ಕಡತಗಳ ಪರಿಶೀಲನೆ ಹಾಗೆಯೇ ಬಾಕಿ ಉಳಿದಿತ್ತು. ಇದೀಗ ಮತ್ತೆ ಐಟಿ ಅಧಿಕಾರ ಶೋಧಕಾರ್ಯ ಮುಂದುವರೆಯುತ್ತಿದೆ. ದೊಡ್ಡ ಬಜೆಟ್ ಮೂವಿಗಳಿಂದ ಕೋಟ್ಯಾಂತರ ರೂಪಾಯಿ ಹಣ ಗಳಿಸಿದ್ದ ಪುನೀತ್ ರಾಜ್ ಕುಮಾರ್, ಸಾಕಷ್ಟು ತೆರಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ನಟಸೌರ್ವಭೌಮ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸಿದ್ದ ಅಪ್ಪು ಮನೆ ಮೇಲೆ ದಾಳಿ ಮಾಡಲಾಗಿತ್ತು.
ನಟ ಯಶ್: ಕತ್ರಿಗುಪ್ಪೆಯಲ್ಲಿರುವ ಯಶ್ ಮನೆಯಲ್ಲಿ ಇಂದು ಐಟಿ ಶೋಧಕಾರ್ಯ ಮುಂದುವರೆಯುತ್ತಿದೆ. ಈಗಾಗಲೇ ಓರ್ವ ಅಧಿಕಾರಿ ನಟ ಯಶ್ ಮನೆಗೆ ಧಾವಿಸಿದ್ದಾರೆ. ನಿನ್ನೆ ಐವರು ಅಧಿಕಾರಿಗಳು ಸತತ 17 ಗಂಟೆಗಳ ಕಾಲ ಪರಿಶೀಲನೆ ನಡೆಸಿದ್ದರು. ಇಂದು ಬೆಳಗ್ಗೆ 8 ರಿಂದಲೇ ಐಟಿ ಅಧಿಕಾರಿಗಳ ಪರಿಶೀಲನೆ ಆರಂಭ ಸಾಧ್ಯತೆಯಿದೆ ಎನ್ನಲಾಗಿತ್ತು. ಯಶ್ ಪತ್ನಿ ರಾಧಿಕಾ ಪಂಡಿತ್ ಮನೆಗೂ ಭೇಟಿ ನೀಡಿದ್ದ ಐಟಿ ಅಧಿಕಾರಿಗಳು, ಆಕೆ ತಂದೆ-ತಾಯಿಯನ್ನು ಪ್ರಶ್ನಿಸಿದ್ದರು. ಬಳಿಕ ರಾಧಿಕಾ ತಂದೆ ಕೃಷ್ಣಪ್ರಸಾದ್ ರನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ಮಹತ್ವದ ದಾಖಲೆ, ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿತ್ತು.
ಶಿವರಾಜ್ ಕುಮಾರ್, ಸುದೀಪ್: ಮಾನ್ಯತಾ ಟೆಕ್ಪಾರ್ಕ್ ಪ್ರದೇಶದಲ್ಲಿರುವ ಶಿವರಾಜ್ ಕುಮಾರ್ ಮನೆ, ಜೆ.ಪಿ. ನಗರದಲ್ಲಿರುವ ಸುದೀಪ್ ಮನೆ, , ಗಾಯತ್ರಿ ನಗರದಲ್ಲಿರುವ ರಾಧಿಕಾ ಅವರ ಪೋಷಕರ ಮನೆ ಸೇರಿದಂತೆ ಸುಮಾರು 25 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು. ಆಸ್ತಿಪಾಸ್ತಿ ಹಾಗೂ ದಾಖಲೆ ಪತ್ರಗಳನ್ನು ಪರಿಶೀಲಿಸಲಾಗಿತ್ತು. ಭಾರಿ ಪ್ರಮಾಣದ ಹಣ- ಆಭರಣಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಎಲ್ಲಾ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಲು ಐಟಿ ಅಧಿಕಾರಿಗಳು ಕಡತಗಳನ್ನು ಕಚೇರಿಗೆ ಕೊಂಡೊಯ್ದಿದ್ದರು. ಇದೀಗ ಅದಕ್ಕೆಲ್ಲಾ ಉತ್ತರ ಪಡೆಯಲು ಮತ್ತೆ ಶೋಧಕಾರ್ಯ ಹಾಗೂ ವಿಚಾರಣೆ ಮುಂದುವರೆಸಲಾಗುತ್ತಿದೆ.
ನಿರ್ಮಾಪಕ ವಿಜಯ್ ಕಿರಗಂದೂರು ಮನೆ ಮೇಲೆ ಐಟಿ ರೈಡ್ ಆಗಿತ್ತು. ನಿನ್ನೆ ತಡರಾತ್ರಿವರೆಗೂ ದಾಖಲೆ ಪರಿಶೀಲನೆ ನಡೆಸಿದ ಐಟಿ ಆಧಿಕಾರಿಗಳು ನಿರ್ಮಾಪಕರನ್ನು ವಿಚಾರಣೆ ನಡೆಸಿದರು. ಈ ವೇಳೆ ನಿರ್ಮಾಪಕ ವಿಜಯ್ ನಿರ್ಮಿಸಿರುವ ಸಿನಿಮಾಗಳು, ಹೂಡಿಕೆ ಮಾಡಿರುವ ಹಣದ ಮೂಲ, ಗಳಿಸಿದ ಆದಾಯ ಸಂಬಂಧದ ದಾಖಲೆಗಳ ಪರಿಶೀಲನೆಯೂ ನಡೆಯುತ್ತಿದೆ. ಈ ನಿರ್ಮಾಪಕರ ಜೊತೆ ನಿಕಟ ಸಂಬಂಧ ಹೊಂದಿರುವವರ ಮನೆ, ಕಚೇರಿಗಳನ್ನು ಶೋಧಿಸಲಾಗುತ್ತಿದೆ. ಐಟಿ ಆಧಿಕಾರಿಗಳು ವಿಜಯ್ ಮನೆಯಿಂದ ಹಲವು ಮಹತ್ವದ ಕಡತಗಳು, ದಾಖಲೆಗಳನ್ನ ಕೊಂಡೊಯ್ದಿದ್ದಾರೆ. ಈ ಸಂಬಂಧ ಇಂದು ಐಟಿ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿ, ಬಳಿಕ ದಾಳಿಗೊಳಗಾದ ವಿಜಯ್ ಕಿರಗಂದೂರುಗೆ ನೋಟಿಸ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಆರೋಪವೇನು?: ದೊಡ್ಡ ಬಜೆಟ್ ಸಿನಿಮಾ ನಿರ್ಮಾಣಕ್ಕೆ ಕಪ್ಪು ಹಣ ಹೂಡಿಕೆ ಮಾಡಲಾಗುತ್ತಿದೆ. ಈ ಮೂಲಕ ಕಪ್ಪುಹಣ ಚಲಾವಣೆಗೆ ತರಲಾಗುತ್ತಿದೆ. ಇದರಿಂದ ಬಂದ ಲಾಭದ ಲೆಕ್ಕ ತೋರಿಸದೆ ವಂಚಿಸಲಾಗುತ್ತಿದೆ ಎಂದು ದೂರು ಬಂದಿದೆ. ಹೀಗಾಗಿ ನಟರು ಮತ್ತು ನಿರ್ಮಾಪಕರು ಬೆಳಿಗ್ಗೆ ನಿದ್ದೆಯಿಂದ ಏಳುವ ಮೊದಲೇ ವಿವಿಧ ತಂಡಗಳನ್ನು ರಚಿಸಕೊಂಡು ಬಾಗಿಲು ಬಡಿದೆವು. ಬುಧವಾರವೇ ಕೋರ್ಟ್ನಿಂದ ವಾರಂಟ್ ಪಡೆದಿದ್ದ ನಾವು, ಎಲ್ಲರ ಮನೆಗಳ ಶೋಧ ನಡೆಸಿದೆವು. 200 ಐ.ಟಿ ಅಧಿಕಾರಿಗಳಿರುವ 30 ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದೆವು ಎನ್ನುತ್ತಾರೆ ಐಟಿ ಹಿರಿಯ ಅಧಿಕಾರಿಯೊಬ್ಬರು.