ನವದೆಹಲಿ: ರಫೇಲ್ ವಿವಾದದ ಕುರಿತಾಗಿ ಇಂದಿನ ಸಂಸತ್ ಅಧಿವೇಶನದಲ್ಲಿಯೂ ವಾಗ್ಯುದ್ಧ ನಡೆಯುವ ಸೂಚನೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ್ದಾರೆ. ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ರಫೇಲ್ನ ತೆರೆದ ಪುಸ್ತಕದ ಪರೀಕ್ಷೆಯನ್ನು ಎದುರಿಸಲಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಡೀಲ್ ಕುರಿತಾಗಿ ಪ್ರಧಾನಿ ಮೋದಿ ಅವರಿಗೆ ತೆರೆದ ಪುಸ್ತಕದ ಪರೀಕ್ಷೆ ನಡೆಯಲಿದೆ. ಅದರಲ್ಲಿ 126 ಯುದ್ಧ ವಿಮಾನಗಳ ಬದಲಾಗಿ 36 ಯುದ್ಧ ವಿಮಾನಗಳಿಗೆ ಒಪ್ಪಂದ ನೀಡಿದ್ದೇಕೆ? ಪ್ರತಿ ಹೆಲಿಕಾಪ್ಟರ್ಗೆ 560 ಕೋಟಿ ಬದಲಾಗಿ ಹೆಚ್ಚುವರಿಯಾಗಿ 1600 ಕೋಟಿ ನೀಡಿದ್ದೇಕೆ? ಹೆಚ್ಎಎಲ್ ಬದಲಾಗಿ ಎಎ (ಅನಿಲ್ ಅಂಬಾನಿ) ಆಯ್ಕೆ ಮಾಡಿದ್ದೇಕೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಪ್ರಧಾನಿಗಳು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ. ಟ್ವೀಟ್ ಮೂಲಕ ಮತ್ತೊಂದು ಪ್ರಶ್ನೆ ಹಾಕಿರುವ ರಾಗಾ, ಗೋವಾ ಸಿಎಂ ಪರಿಕ್ಕರ್ ಏಕೆ ರಫೇಲ್ ಡೀಲ್ ಫೈಲ್ಗಳನ್ನು ತಮ್ಮ ಬೆಡ್ ರೂಂನಲ್ಲಿ ಇಟ್ಟುಕೊಂಡಿದ್ದಾರೆ ಎಂದು ಪ್ರಧಾನಿಗಳು ದಯಮಾಡಿ ಉತ್ತರಿಸಿ ಎಂದು ಕಿಚಾಯಿಸಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಈ ಮೂಲಕ ಕುಟುಕಿರುವ ರಾಹುಲ್, ಈ ಎಲ್ಲಾ ಪ್ರಶ್ನೆಗಳಿಗೆ ಮೋದಿ ಸಂಸತ್ನಲ್ಲಿ ಉತ್ತರಿಸಬೇಕಿತ್ತು. ಆದರೆ ಆ ಧೈರ್ಯವಿಲ್ಲದೆ ಅವರ ಕೋಣೆಯಲ್ಲಿ ಅಡಗಿ ಕೂತಿದ್ದಾರೆ ಎಂದಿದ್ದಾರೆ. ಅಲ್ಲದೆ ಪರಿಕ್ಕರ್ ರಫೇಲ್ ಡೀಲ್ನ ಫೈಲ್ಗಳು ತನ್ನ ಬಳಿ ಇವೆ ಎನ್ನುವ ಮೂಲಕ ಪ್ರಧಾನಿಗೆ ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.