ಪ್ರಜ್ವಲ್ ರೇವಣ್ಣ ಹಾಸನದಿಂದ ಲೋಕಸಭೆ ಸ್ಪರ್ಧೆ: ಇಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಸಾಧ್ಯತೆ

ಬೆಂಗಳೂರು: ಲೋಕಸಭೆ ಚುನಾವಣೆಗೆ ಜೆಡಿಎಸ್ ಸಿದ್ಧತೆ ಆರಂಭಿಸಿದ್ದು, ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧ, ಜೆಡಿಎಸ್ ವರಿಷ್ಠ ದೇವೇಗೌಡ, ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ನೇತೃತ್ವದಲ್ಲಿ ಜೆಪಿ ಭವನದಲ್ಲಿ ಇಂದು ಸಭೆ ನಡೆಯಲಿದೆ.

ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಜಿಲ್ಲಾ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸೀಟು ಹಂಚಿಕೆ, ಮೈತ್ರಿ ವಿಚಾರ ಕುರಿತು ಮುಖಂಡರ ಅಭಿಪ್ರಾಯವನ್ನ ಜೆಡಿಎಸ್ ವರಿಷ್ಠ ದೇವೇಗೌಡ ಸಂಗ್ರಹಿಸಲಿದ್ದಾರೆ.

ಇದೇ ವೇಳೆ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧೆ ಮಾಡುವ ವಿಚಾರ ಅಂತಿಮಗೊಳ್ಳುವ ಸಾಧ್ಯತೆ ಇದೆ. ಇನ್ನೂ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲು ಎಚ್.ವಿಶ್ವನಾಥ್ ಮನವಿ ಮಾಡಿದ್ದು, ಇದಕ್ಕೆ ದೇವೇಗೌಡರು ಒಪ್ಪುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ನೀವೇ ಮಂದುವರಿಯಿರಿ ಎಂದು ವಿಶ್ವನಾಥ್ ಅವರಿಗೆ ದೇವೇಗೌಡರು ಸಲಹೆ ನೀಡುವ ಸಾಧ್ಯತೆಯೇ ಹೆಚ್ಚಿದೆ.

ಈ ಹಿಂದೆಯೇ ಪ್ರಜ್ವಲ್ ರೇವಣ್ಣ ಕಳೆದ ಎಂಟು ವರ್ಷದಿಂದ ಹಾಸನ ಜಿಲ್ಲೆಯಲ್ಲಿ ಓಡಾಡುತ್ತಿದ್ದಾನೆ. ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಕಾರ್ಯದಲ್ಲಿ ತೊಡಗಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಕ್ಷೇತ್ರವನ್ನ ಆತನಿಗೆ ಬಿಟ್ಟುಕೊಡುತ್ತೇನೆ ಎಂದು ಎಚ್.ಡಿ ದೇವೇಗೌಡ ಈ ಹಿಂದೆ ಹೇಳಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ