ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಆ ವಾಹನಗಳ ಸಹಾಯದಿಂದ ಸರಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಜ.2- ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಆ ವಾಹನಗಳನ್ನೇ ಬಳಸಿಕೊಂಡು ಸರಕಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಉತ್ತರ ವಿಭಾಗದ ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಅಬ್ದುಲ್‍ವಾಹಿದ್ (21) ಮತ್ತು ಅಬ್ರಾರ್(21) ಬಂಧಿತ ಆರೋಪಿಗಳಾಗಿದ್ದು, ಇವರಿಂದ 25 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪೆನಿಗಳ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಅಬ್ದುಲ್ ವಾಹಿದ್ ಆರ್.ಟಿ.ನಗರದಲ್ಲಿ ವಾಸವಾಗಿದ್ದು, ಅಬ್ರಾರ್ ಯಶವಂತಪುರದಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದನು. ಈ ಇಬ್ಬರು ಸೇರಿಕೊಂಡು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಆ ವಾಹನಗಳನ್ನೇ ಬಳಸಿಕೊಂಡು ಸರಗಳ್ಳತನ ನಡೆಸುತ್ತಿದ್ದರು.

ಇತ್ತೀಚೆಗೆ ಯಶವಂತಪುರ ಠಾಣೆ ವ್ಯಾಪ್ತಿಯ ಗೀತಾ ಎಂಬುವರು ಮನೆ ಮುಂಭಾಗದ ಗೇಟ್ ಬಳಿ ನಿಂತುಕೊಂಡು ರಸ್ತೆ ದಾಟಲು ಮುಂದಾಗುತ್ತಿದ್ದಂತೆ ಮತ್ತೀಕೆರೆಯ ಈಶ್ವರ ದೇವಸ್ಥಾನ ಕಡೆಯಿಂದ ಬೈಕ್‍ನಲ್ಲಿ ಬಂದ ಇಬ್ಬರು ಸರಕಳ್ಳರು ಅವರ ಕೊರಳಲಿದ್ದ ಮಾಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಇಬ್ಬರು ಸರಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ವೇಳೆ ನೀಡಿದ ಹೇಳಿಕೆ ಮೇರೆಗೆ 25 ಲಕ್ಷ ಬೆಲೆ ಬಾಳುವ ಮೂರು ಬುಲೆಟ್ ಸೇರಿದಂತೆ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ ಯಶವಂತಪುರ ಠಾಣೆಯ ಒಂದು ಸರಗಳ್ಳತನ ಪ್ರಕರಣ ಮತ್ತು 16 ದ್ವಿಚಕ್ರ ವಾಹನ ಕಳವು ಪ್ರಕರಣ, ಆರ್.ಟಿ.ನಗರ ಎರಡು, ಜಾಲಹಳ್ಳಿ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಸೇರಿ ಒಟ್ಟು 20 ಪ್ರಕರಣಗಳು ಪತ್ತೆಯಾದಂತಾಗಿದೆ.

ಯಶವಂತಪುರ ಉಪ ವಿಭಾಗದ ಎಸಿಪಿ ರವಿಪ್ರಸಾದ್ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಮುದ್ದರಾಜ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ