ಬೆಂಗಳೂರು, ಜ.2- ಕನಕಪುರದಿಂದ ಮಗಳ ಮನೆಗೆಂದು ನಗರಕ್ಕೆ ಬಂದಿದ್ದ ವ್ಯಕ್ತಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಕನಕಪುರದ ಶಿವಮಾದಯ್ಯ (68) ಮೃತ ದುರ್ದೈವಿ. ಶಿವಮಾದಯ್ಯ ಪುತ್ರಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಮಗಳ ಮನೆಗೆ ಬಂದಿದ್ದರು.ಸಂಜೆ 6 ಗಂಟೆ ಸಮಯದಲ್ಲಿ ಸಂಬಂಧಿ ಜತೆ ಮಾತನಾಡುತ್ತಾ ದೊಡ್ಡಬಳ್ಳಾಪುರ ಮುಖ್ಯರಸ್ತೆ, ಸಿಆರ್ಪಿಎಫ್ ಗೇಟ್ ಬಳಿ ರಸ್ತೆ ದಾಟುತ್ತಿದ್ದರು.
ಈ ವೇಳೆ ಅತಿವೇಗವಾಗಿ ಮುನ್ನುಗ್ಗಿದ ಕಾರು ಶಿವಮಾದಯ್ಯರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.
ಇವರ ಜತೆಗಿದ್ದ ಸಂಬಂಧಿ ಅದೃಷ್ಟವಶಾತ್ ಪಾರಾಗಿದ್ದಾರೆ.ಅಪಘಾತ ಸಂಭವಿಸುತ್ತಿದ್ದಂತೆ ಕಾರನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಯಲಹಂಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.