ಬೆಂಗಳೂರು, ಡಿ.31-ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಇಂದು ಸಂಜೆ 6 ಗಂಟೆಗೆ ಭೂಸ್ವಾಧೀನ – ಬದಲಾದ ದೃಷ್ಟಿಕೋನ ಎಂಬ ಕೃತಿಯ ಕನ್ನಡ ಮತ್ತು ಆಂಗ್ಲ ಭಾಷೆಯ ಆವೃತ್ತಿ ಬಿಡುಗಡೆಗೊಳಿಸಲಾಗುತ್ತಿದೆ.
ಸುಪ್ರೀಂಕೋರ್ಟ್ನ ವಿಶ್ರಾಂತ ನ್ಯಾಯಾಧೀಶರಾದ ಶಿವರಾಜ್ ವಿ.ಪಾಟೀಲ್ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.
ನಿವೃತ್ತ ಕೆಎಎಸ್ ಅಧಿಕಾರಿ ಎಸ್.ಜಿ.ಬಿರಾದಾರ ಅವರ ಸಂಶೋಧನಾ ಭಾಗವಾಗಿ ಭೂಸ್ವಾಧೀನ ಕಾಯ್ದೆ 2013ರ ಕುರಿತಂತೆ ಈ ಕೃತಿ ರಚಿತವಾಗಿದ್ದು, ಪ್ರತಿವರ್ಷದಂತೆ ಈ ವರ್ಷದ ಕೊನೆಯ ದಿನವಾದ ಇಂದು ಕಾರ್ಯಕ್ರಮ ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ದಿನಚರಿ ಬಿಡುಗಡೆಗೊಳ್ಳುತ್ತಿದೆ. ಕರ್ನಾಟಕದ ಆಡಳಿತ ಸೇವೆಯ ವಿವಿಧ ಶ್ರೇಣಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಕ್ಕೂ ಹೆಚ್ಚು ಕೆಎಎಸ್ ಅಧಿಕಾರಿಗಳು ಸೇರಿದಂತೆ ನಿವೃತ್ತ ಅಧಿಕಾರಿಗಳು ಒಳಗೊಂಡಿರುವ ಕರ್ನಾಟಕ ಸೇವೆ ಅಧಿಕಾರಿಗಳ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಜನಸಾಮಾನ್ಯರಿಗೆ ಅವಶ್ಯವಿರುವ ವಿಷಯಗಳ ಕುರಿತು ಸಂಶೋಧನೆ ನಡೆಸಿ ಅವುಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ನಿರ್ವಹಿಸುತ್ತಿದೆ.