ಯಶವಂತಪುರ, ಡಿ.31- ಕ್ಷೇತ್ರದಲ್ಲಿ ಶಕ್ತಿ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಮತದಾರರಿಂದ ನಿರೀಕ್ಷಿತ ಸ್ಪಂದನೆ ಸಿಗದೆ ಚುನಾವಣೆಯಲ್ಲಿ ಸೋಲುವುದರಲ್ಲಿದ್ದೆ ಸ್ವಲ್ಪದರಲ್ಲೇ ಜಸ್ಟ್ ಪಾಸ್ ಆಗಿರುವುದಾಗಿ ಶಾಸಕ ಎಸ್.ಟಿ ಸೋಮಶೇಖರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೊಡ್ಡಬಿದರಕಲ್ಲು ವಾರ್ಡಿನ ಹೊಸಹಳ್ಳಿಯ ಪಟೇಲï ಮುನಿಯಪ್ಪ ವೃತ್ತ ಹಾಗೂ ಡಿ – ಗ್ರೂಪ್ ಬಡಾವಣೆಯ ರಾಮಸಿಂಗ್ ವೃತ್ತದಲ್ಲಿ ಯುಜಿಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಐದು ವರ್ಷಗಳ ಕಾಲ ಪ್ರಾಮಾಣಿಕವಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೆ ಆದರೂ ಚುನಾವಣೆಯಲ್ಲಿ ಮತದಾರರು ನನ್ನನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಕೈಹಿಡಿಯಲಿಲ್ಲ, ನನಗೆ ಕುರುಡಾಗಿ ಮತ ಹಾಕಬೇಕಿತ್ತೆಂದು ನಾನು ಹೇಳುತ್ತಿಲ್ಲ. ರಾಜಕಾರಣದಲ್ಲಿ ಮತದಾರರು ಸರ್ವ ಸ್ವತಂತ್ರರು ಹಾಗೆಂದು ಕೆಲಸ ಮಾಡಿದವರನ್ನು ಗುರುತಿಸಬೇಡವೆ? ಕೆಲಸಗಾರನಿಗೆ ಬೆಲೆ ಇಲ್ಲವೇ ? ಏಕೆ ಸಹಕಾರ ಕೊಡಲಿಲ್ಲ, ಕೆಲಸ ಮಾಡಿದವರಿಗೆ ಮತ ಹಾಕಬೇಕಿತ್ತಲ್ಲವೆ ? ಇದನ್ನು ಕೇಳುವ ಹಕ್ಕಿಲ್ಲವೇ ಅಂಥ ಭಾವುಕರಾದರು.
ಕ್ಷೇತ್ರದ 5 ವಾರ್ಡುಗಳಲ್ಲಿ 2 ರಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಗಳಿದ್ದಾರೆ. ಹೇರೋಹಳ್ಳಿ ಹಾಗೂ ದೊಡ್ಡಬಿದರಕಲ್ಲು ಕಾಂಗ್ರೆಸ್ನ ಭದ್ರಕೋಟೆ. ಇಲ್ಲಿ ಹಿಂದೆಂದೂ ಆಗದಷ್ಟು ಕೆಲಸಗಳಾಗಿವೆ. ಆದರೂ 62 ಮತಗಟ್ಟೆಗಳ ಪೈಕಿ ಕೇವಲ ಎರಡರಲ್ಲಿ ಮಾತ್ರ ನನಗೆ ಲೀಡ್ ಕೊಟ್ಟಿದ್ದೀರಿ. ಚುನಾವಣಾ ತಂತ್ರಗಳು, ಒಳಸುಳಿಗಳು ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಾರ್ಡ್ ವ್ಯಾಪ್ತಿಯಲ್ಲಿ 44ಕಿ.ಮೀ ಒಳಚರಂಡಿ ಕಾಮಗಾರಿ ಮಾಡಬೇಕಿದೆ. ಈಗಾಗಲೇ 10 ಕಿ.ಮೀ ಪ್ರಗತಿಯಲ್ಲಿದೆ. 18 ಕಿ.ಮೀ ಸರ್ವೆ ಆಗಿದೆ. ಮೂರು ತಿಂಗಳಲ್ಲಿ ಪೂರ್ತಿ ಕಾಮಗಾರಿ ಶುರುವಾಗಲಿದೆ.ವಾರ್ಡ ನ ಸಂಪೂರ್ಣ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇನೆ.ಅಗತ್ಯವಿರುವ ಕಡೆಗಳಲ್ಲಿ ಶುದ್ಧ ನೀರಿನ ಘಟಕಗಳ ಜತೆಗೆ ಕಾವೇರಿ ನೀರು ಪೂರೈಸುವ ಮೂಲಕ ನೀರಿನ ಬವಣೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು.ಒಳಚರಂಡಿ, ಪೈಪ ಅಳವಡಿಕೆ ಕಾರ್ಯ ಮುಗಿದ ನಂತರ ಡಾಂಬರೀಕರಣ ಮಾಡಲಾಗುವುದು.ಕಾಮಗಾರಿ ವೇಳೆ ಸಾರ್ವಜನಿಕರು ಸಹಕರಿಸಿ.ರಾಜಕಾಲುವೆ, ಸೇತುವೆಗಳು ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಒದಗಿಸಲು ಸರ್ಕಾರದ ಮಟ್ಟದಲ್ಲಿ ಅನುದಾನಕ್ಕಾಗಿ ಶ್ರಮಿಸುವುದಾಗಿ ತಿಳಿಸಿದರು.
ಕಾರ್ಪೊರೇಟರ್ ವಾಸುದೇವ್, ಡಿಗ್ರೂಪ್ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ಸಂತೋಷ್, ಮುಖಂಡರಾದ ಸತೀಶ್, ಕೂರ್ಲಪ್ಪ, ಪ್ರಶಾಂತ್ ಮತ್ತಿತರರು ಹಾಜರಿದ್ದರು.