ಕನ್ನಡ ಚಿತ್ರರಂಗದ ಅಂಕಲ್ ಎಂದೇ ಪ್ರಸಿದ್ಧಿಯಾಗಿದ್ದ ಹಿರಿಯ ನಟ ಲೋಕನಾಥ್ ನಿಧನ

ಬೆಂಗಳೂರು, ಡಿ.31- ಕನ್ನಡ ಚಿತ್ರರಂಗದಲ್ಲಿ ಅಂಕಲ್ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಹಿರಿಯ ನಟ ಲೋಕನಾಥ್ ಅವರು ವಯೋಸಹಜ ಕಾಯಿಲೆಯಿಂದಾಗಿ ತಡರಾತ್ರಿ 12.15ಕ್ಕೆ ಪದ್ಮನಾಭನಗರದ ಅವರ ನಿವಾಸದಲ್ಲಿ ವಿಧಿವಶರಾಗಿದ್ದಾರೆ.

ಅವರ ಅಂತ್ಯಕ್ರಿಯೆಯು ಇಂದು ಸಂಜೆ 4 ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಕೆ.ವಿ.ಐಯ್ಯರ್ ಅವರಿಂದ ನಾಟಕ ಲೋಕಕ್ಕೆ ಪರಿಚಯವಾದ ಲೋಕನಾಥ್ ಬಂಡವಾಳವಿಲ್ಲದ ಬಡಾಯಿ ನಾಟಕದಲ್ಲಿ ನಟಿಸಿದ್ದ ನಂತರ 5 ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆ ಸಲ್ಲಿಸಿರುವ ಲೋಕನಾಥ್ ಅವರು ಮೂಲತಃ ರಂಗಭೂಮಿ ಕಲಾವಿದರು.ರವಿ ಕಲಾವಿದರು, ನಟರಂಗ, ಸಮುದಾಯ, ಸೂತ್ರಧಾರ ಸೇರಿದಂತೆ ಹಲವು ನಾಟಕ ಕಂಪನಿಗಳಲ್ಲಿ ಗುರುತಿಸಿಕೊಂಡಿದ್ದ ಲೋಕನಾಥ್ ಅವರು ಸುಮಾರು 1000ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ.

ಬಣ್ಣದ ಲೋಕಕ್ಕೆ ಎಂಟ್ರಿ:
ಇಂಜಿನಿಯರ್ ಪದವೀಧರರಾಗಿದ್ದ ಲೋಕನಾಥ್ ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿಯವರ ಕಥೆ ಆಧರಿಸಿದ ನಿರ್ದೇಶಕ ಪಟ್ಟಾಭಿ ರಾಮರೆಡ್ಡಿ ಅವರು 1970ರಲ್ಲಿ ನಿರ್ದೇಶಿಸಿದ್ದ ಸಂಸ್ಕಾರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಇದುವರೆಗೂ 650 ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ.

ಚಿತ್ರರಂಗದ ಖ್ಯಾತ ನಿರ್ದೇಶಕರಾದ ಪುಟ್ಟಣ್ಣಕಣಗಾಲ್, ಸಿದ್ಧಲಿಂಗಯ್ಯ ಮುಂತಾದ ನಿರ್ದೇಶಕರ ಚಿತ್ರಗಳಲ್ಲಿ ಖಾಯಂ ನಟರಾಗಿದ್ದ ಲೋಕನಾಥ್ ಅವರು ಸಿದ್ಧಲಿಂಗಯ್ಯ ನಿರ್ದೇಶಿಸಿದ್ದ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ನಟಿಸಿದ ನಂತರ ಉಪ್ಪಿನಕಾಯಿ ಎಂಬ ಹೆಸರು ಅವರೊಂದಿಗೆ ಸೇರಿಕೊಂಡಿತು.

ಅಂದಿನ ಸ್ಟಾರ್ ನಟರುಗಳಾದ ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್, ಅನಂತ್‍ನಾಗ್, ಶಂಕರ್‍ನಾಗ್, ಪ್ರಭಾಕರ್‍ರಂತಹ ಅದ್ಭುತ ಕಲಾವಿದರೊಂದಿಗೆ ನಟಿಸಿದ್ದ ಲೋಕನಾಥ್ ಅವರಿಗೆ ಗೆಜ್ಜೆಪೂಜೆ, ಬಂಗಾರದ ಮನುಷ್ಯ, ಮಿಂಚಿನ ಓಟ, ಭೂತಯ್ಯನ ಮಗ ಅಯ್ಯು ಸೇರಿದಂತೆ ಹಲವು ಚಿತ್ರಗಳು ಹೆಸರು ತಂದುಕೊಟ್ಟಿವೆ. 2012ರಲ್ಲಿ ತೆರೆಕಂಡ ದುನಿಯಾ ವಿಜಯ್ ಅಭಿನಯದ ಭೀಮಾತೀರದ ಹಂತಕರು ಚಿತ್ರ ಲೋಕನಾಥ್ ನಟಿಸಿದ ಅಂತಿಮ ಚಿತ್ರ.

ಆಗಸ್ಟ್ 14,1927ರಂದು ಹನುಮಂತಪ್ಪ ಹಾಗೂ ಗೌರಮ್ಮ ದಂಪತಿಯ ಪುತ್ರರಾಗಿ ಬೆಂಗಳೂರಿನಲ್ಲಿ ಜನಿಸಿದ ಲೋಕನಾಥ್ ಅವರು ಸ್ವಾತ್ರಂತ್ರ್ಯ ಹೋರಾಟವನ್ನು ಕೂಡ ಕಣ್ಣಾರೆ ಕಂಡಿದ್ದವರು, ಅವರ ಆಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟ ಉಂಟಾಗಿದೆ.

ಶಂಕರ್‍ನಾಗ್ ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್ ಎಂಬ ಧಾರಾವಾಹಿಯು ಲೋಕನಾಥ್‍ಗೆ ಜನಪ್ರಿಯತೆ ತಂದುಕೊಟ್ಟಿತ್ತು.

ಕಲಾಸೇವೆಯಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಲೋಕನಾಥ್ ಅವರಿಗೆ ಆರ್ಯಭಟ ಪ್ರಶಸ್ತಿ, ಉತ್ತಮ ಪೋಷಕ ನಟ, ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಅಂತಿಮ ದರ್ಶನ:
ಲೋಕನಾಥ್ ಅವರು ಒಬ್ಬ ಪುತ್ರ ಹಾಗೂ ನಾಲ್ವರು ಪುತ್ರಿಯನ್ನು ಅಗಲಿದ್ದು, ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಇಡಲಾಗಿದ್ದ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಚಿತ್ರರಂಗದವರು ಹಾಗೂ ಸಾರ್ವಜನಿಕರು ಪಡೆದರು.

ಚಿತ್ರರಂಗದ ಸಂತಾಪ:
ಹಿರಿಯ ನಟ, ರಂಗಕರ್ಮಿ ಲೋಕನಾಥ್ ಅವರ ಅಗಲಿಕೆಗೆ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಸೇರಿದಂತೆ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಕಂಬನಿ ಮಿಡಿದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ