ಬೆಂಗಳೂರು,ಡಿ.31- ಹಿರಿಯ ಸಾಹಿತಿ ಎಸ್.ಎಲ್.ಭೆರಪ್ಪ ಮೈಸೂರಿನಲ್ಲಿ ನಡೆದ ಸಾಹಿತ್ಯ ಪರಿಷತ್ ರಾಜ್ಯ ಸಮ್ಮೇಳನದಲ್ಲಿ ಸಾಹಿತ್ಯ ಹಾಗೂ ಕಾದಂಬರಿಗಿಂತ ಕಾಂಗ್ರೆಸ್ ವಿರುದ್ಧ ಹಾಗೂ ರಾಜಕೀಯ ಹೇಳಿಕೆಗಳನ್ನು ನೀಡಿ ಬಿಜೆಪಿ ಮತ್ತು ನರೇಂದ್ರ ಮೋದಿಯವರ ವಕ್ತಾರರಂತೆ ವರ್ತಿಸಿರುವುದನ್ನು ಕಾಂಗ್ರೆಸ್ ಖಂಡಿಸಿದೆ.
ಸಾಹಿತ್ಯ ಪರಿಷತ್ ವೇದಿಕೆಯನ್ನು ಸಾಹಿತ್ಯ ಲೋಕಕ್ಕೆ ಸೀಮಿತಗೊಳಿಸದೆ ರಾಜಕೀಯ ವೇದಿಕೆಯಾಗಿ ಉಪಯೋಗಿಸಿಕೊಂಡಿರುವುದು ಅವರಿಗೆ ಶೋಭೆ ತರುವಂತಹದ್ದಲ್ಲ. ನೆಹರು ಅವರ ಹೆಸರನ್ನು ಪ್ರಸ್ತಾಪಿಸಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ.
ದೇಶದಲ್ಲಿ ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲವೆಂಬುದನ್ನು ಅವರು ಸ್ಪಷ್ಟ ಪಡಿಸಬೇಕು ಎಂಬುದನ್ನು ಮುಖಂಡರಾದ ಜಿ.ಜನಾರ್ದನ್, ಎಸ್.ಮನೋಹರ್, ಆನಂದ್ ಮುಂತಾದವರು ಆಗ್ರಹಿಸಿದ್ದಾರೆ.
ಸರ್ದಾರ್ ವಲ್ಲಭಭಾಯ್ ಪಟೇಲ್, ಮಹಾತ್ಮ ಗಾಂಧೀಜಿಯವರ ಬಗ್ಗೆ ಮಾತನಾಡಿರುವ ಭೆರಪ್ಪನವರು ಮಹಾತ್ಮ ಗಾಂಧಿಯವರನ್ನು ಕೊಂದವರ ಬಗ್ಗೆ ಮಾತನಾಡುವುದಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಯುವಕರು ಪಕ್ಷಾತೀತವಾಗಿ ಆಲೋಚಿಸಿ ಸತ್ಯಾನ್ವೇಷಣೆಯಲ್ಲಿ ತೊಡಗಿ ಎಂದು ಹೇಳಿರುವ ಅವರು, ನರೇಂದ್ರ ಮೋದಿಯವರು ಯುವಕರಿಗೆ ಎಷ್ಟು ಸಂಖ್ಯೆಯಲ್ಲಿ ಉದ್ಯೋಗ ನೀಡಿದ್ದಾರೆ ಎಂಬುದನ್ನು ತಿಳಿಸಬೇಕಿತ್ತು.
2008ರಿಂದ 13ರವರೆಗೆ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಹಗಲು ದರೋಡೆ, ರೈತರ ಭೂ ಕಬಳಿಕೆ, ಖನಿಜ ಸಂಪತ್ತಿನ ಲೂಟಿ ಬಗ್ಗೆ ತನಿಖೆ ನಡೆದು ಜೈಲು ಸೇರಿದ್ದ ವ್ಯಕ್ತಿಗಳು ಯಾವ ಪಕ್ಷದವರು ಎಂಬುದನ್ನು ಯುವಜನತೆಗೆ ಭೆರಪ್ಪನವರು ವಿವರಿಸಬೇಕು ಎಂದು ಹೇಳಿದ್ದಾರೆ.