ತುಮಕೂರು, ಡಿ.28- ಶಾಲಾ ಬಸ್ ಚಾಲಕನ ಅಜಾಗರೂಕತೆ ಚಾಲನೆಯಿಂದಾಗಿ ಬಸ್ ಉರುಳಿಬಿದ್ದಿದ್ದು, ಅದೃಷ್ಟವಶಾತ್‍ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಸ್‍ನಲ್ಲಿದ್ದ ಸುಮಾರು ಹತ್ತಕ್ಕೂ ಹೆಚ್ಚು ಮಕ್ಕಳು ಸಣ್ಣಪುಟ್ಟ ಗಾಯಗೊಂಡಿದ್ದು, ಸುತ್ತಮುತ್ತಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನುಡಿಕೆ ಬಳಿಯಿರುವ ಭೀಷ್ಮ ಪವನ್‍ಎಜುಕೇಷನ್ ಎಂಬ ಶಾಲೆಗೆ ಸೇರಿದ ಬಸ್ ಇಂದು ಬೆಳಗ್ಗೆ ಸುತ್ತಮುತ್ತಲಿನ ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿತ್ತು.
ಈ ವೇಳೆ ಚಾಲಕನ ಮೊಬೈಲ್‍ಗೆ ಕರೆಯೊಂದು ಬಂದಿದ್ದು, ಮೊಬೈಲ್‍ನಲ್ಲಿ ಮಾತನಾಡುತ್ತಾ ಅಜಾಗರೂಕತೆಯಿಂದ ಬಸ್ ಚಾಲನೆ ಮಾಡುತ್ತಿದ್ದಾಗ ನಾಗವಲ್ಲಿ ಶಿವಗಂಗೆ ರಸ್ತೆ, ವಿರೂಪಸಂದ್ರ ಬಳಿ ಚಾಲಕನ ನಿಯಂತ್ರಣತಪ್ಪಿ ಬಸ್ ಉರುಳಿ ಬಿದ್ದಿದೆ.
ಘಟನೆ ನಡೆಯುತ್ತಿದ್ದಂತೆ ಸುತ್ತಮುತ್ತಲಿನ ನಾಗರಿಕರು ಸ್ಥಳಕ್ಕಾಗಮಿಸಿ ಗಾಯಗೊಂಡ ಮಕ್ಕಳನ್ನು ಹೊನ್ನುಡಿಕೆ, ನಾಗವಲ್ಲಿ, ತುಮಕೂರು ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.
ಈ ವೇಳೆ ದಾವಣಗೆರೆ ಮೂಲದ ಬಸ್ ಚಾಲಕ ಪರಾರಿಯಾಗಿದ್ದಾನೆ. ಸುದ್ದಿ ತಿಳಿದ ಹೊನ್ನುಡಿಕೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಚಾಲಕನಿಗಾಗಿ ಶೋಧಕೈಗೊಂಡಿದ್ದಾರೆ.