ಕೇಸರಿ ಪಾಳ್ಯದ ಮಾತಿನ ಪ್ರಕಾರ ಯಾವುದೇ ಸಂದರ್ಭದಲ್ಲೂ ಅಮಿತ್ ಷಾ ಬೇಟಿಯಾಗಲಿರುವ ರಮೇಶ್ ಜಾರಕಿಹೊಳಿ

ಬೆಂಗಳೂರು,ಡಿ.28-ಸಚಿವ ಸ್ಥಾನ ಕಳೆದುಕೊಂಡು ಪಕ್ಷದ ವಿರುದ್ಧ ಸಡ್ಡು ಹೊಡೆದಿರುವ ಮಾಜಿ ಸಚಿವ ಹಾಗೂ ಬೆಳಗಾವಿಯ ಸಾಹುಕಾರ ಎಂದೇ ಕರೆಯುವ ರಮೇಶ್ ಜಾರಕಿಹೊಳಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿಯಾಗಲಿದ್ದಾರೆಯೇ..?

ಪಕ್ಷದ ಮೂಲಗಳ ಪ್ರಕಾರ ಈಗಾಗಲೇ ಕಾಂಗ್ರೆಸ್‍ನಿಂದ ಒಂದು ಕಾಲು ಹೊರಗಿಟ್ಟು ಪಕ್ಷಕ್ಕೆ ಗುಡ್‍ಬೈ ಹೇಳಲು ತೀರ್ಮಾನಿಸಿರುವ ರಮೇಶ್ ಜಾರಕಿಹೊಳಿ ಯಾವುದೇ ಸಂದರ್ಭದಲ್ಲೂ ಅಮಿತ್ ಷಾ ಅವರನ್ನು ಭೇಟಿಯಾಗಲಿದ್ದಾರೆ ಎಂಬ ಮಾತುಗಳು ಕೇಸರಿಪಾಳ್ಯದಲ್ಲಿ ಕೇಳಿಬರುತ್ತಿದೆ.

ಕಳೆದ ಮೂರು ದಿನಗಳಿಂದ ಯಾರ ಕೈಗೂ ಸಿಗದೆ ಅಜ್ಞಾತ ಸ್ಥಳದಲ್ಲಿರುವ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಅಲ್ಲಿನ ಪ್ರಬಲ ವಾಲ್ಮೀಕಿ ಸಮುದಾಯದ ಸಚಿವರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಲು ವೇದಿಕೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಮೇಶ್ ಜಾರಕಿಹೊಳಿಯ ಮನವೊಲಿಸಲು ಸಹೋದರ ಹಾಗೂ ಸಚಿವ ಸತೀಶ್ ಜಾರಕಿಹೊಳಿ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರಾದರೂ ಈವರೆಗೂ ಅದು ಕೈಗೂಡಿಲ್ಲ. ಕಾಂಗ್ರೆಸ್ ತ್ಯಜಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆ ನಡೆಸಲು ಸಜ್ಜಾಗಿದ್ದಾರೆ.

ಪಟ್ಟಿಯೊಂದಿಗೆ ದೆಹಲಿಗೆ:
ಒಂದು ಮೂಲದ ಪ್ರಕಾರ ರಮೇಶ್ ಜಾರಕಿಹೊಳಿ ಯಾರ್ಯಾರು ತಮ್ಮ ಜೊತೆ ಬಿಜೆಪಿಗೆ ಬರಲಿದ್ದಾರೆ ಎಂಬ ಪಟ್ಟಿಯನ್ನು ತೆಗೆದುಕೊಂಡು ನವದೆಹಲಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ಬಳ್ಳಾರಿಯ ನಾಲ್ವರು ಶಾಸಕರು ರಾಯಚೂರು, ಕೊಪ್ಪಳದಿಂದ ತಲಾ ಇಬ್ಬರು, ಬೆಳಗಾವಿಯ ಇಬ್ಬರು ಹೀಗೆ ಒಟ್ಟು 12 ಶಾಸಕರ ಪಟ್ಟಿಯನ್ನು ಖಾತ್ರಿಪಡಿಸಿಕೊಂಡೇ ರಮೇಶ್ ಜಾರಕಿಹೊಳಿ ದೆಹಲಿಗೆ ಹೋಗಿದ್ದಾರೆ.

ಈ ಎಲ್ಲ ಭಿನ್ನಮತೀಯ ಶಾಸಕರ ಜೊತೆ ಅವರು ನಿರಂತರ ಸಂಪರ್ಕದಲ್ಲಿದ್ದು, ಕಾಂಗ್ರೆಸ್‍ನ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ತೆಗೆದುಕೊಂಡಿರುವ ನಿರ್ಧಾರದಂತೆ ಪಕ್ಷ ಬಿಡಲು ಸಜ್ಜಾಗಬೇಕೆಂಬ ಸಂದೇಶವನ್ನು ರಮೇಶ್ ಜಾರಕಿಹೊಳಿ ನೀಡಿದ್ದಾರೆ.

ಸಹೋದರರಾದ ಸತೀಶ್ ಜಾರಕಿಹೊಳಿ , ಲಖನ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕರು ಮನವೊಲಿಸುವ ಕಸರತ್ತು ನಡೆಸುತ್ತಿದ್ದಾರಾದರೂ ಯಾರ ಕೈಗೂ ರಮೇಶ್ ಜಾರಕಿಹೊಳಿ ಸಿಗುತ್ತಿಲ್ಲ. ಅವರ ನಡೆ ಕಾಂಗ್ರೆಸ್‍ನಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ.

ನವದೆಹಲಿಗೆ ಬಿಎಸ್‍ವೈ:
ಈ ಬೆಳವಣಿಗೆಗಳ ನಡುವೆಯೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವದೆಹಲಿಗೆ ತೆರಳಿದ್ದಾರೆ.ಎಲ್ಲ ರಾಜ್ಯಾಧ್ಯಕ್ಷರ ಸಭೆಯನ್ನು ಅಮಿತ್ ಷಾ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಿವಾಸದಲ್ಲಿ ಕರೆದಿದ್ದರು.

ಆದರೆ ಇಂದು ನಡೆಯಬೇಕಿದ್ದ ಸಭೆಯನ್ನುಕೊನೆ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಆದರೂ ಯಡಿಯೂರಪ್ಪ ನವದೆಹಲಿಯಲ್ಲೇ ಇರುವುದರಿಂದ ರಮೇಶ್ ಜಾರಕಿಹೊಳಿ, ಅಮಿತ್ ಷಾ ಅವರನ್ನು ಭೇಟಿ ಮಾಡಲು ಇದೇ ವೇಳೆ ಸಜ್ಜಾಗಿದ್ದಾರೆ ಎನ್ನಲಾಗಿದೆ.

ಈ ಬಾರಿ ಅತ್ಯಂತ ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಬಿಜೆಪಿ ಎಲ್ಲಿಯೂ ತಮ್ಮ ಪಕ್ಷಕ್ಕೆ ಕಳಂಕ ಅಂಟಿಕೊಳ್ಳದಂತೆ ನೋಡಿಕೊಳ್ಳುತ್ತಿದೆ. ಎರಡೂ ಬಾರಿ ನಡೆಸಿದ ಆಪರೇಷನ್ ಕಮಲ ತಿರುಗುಬಾಣವಾಗಿ ಪಕ್ಷಕ್ಕೆ ಕೆಟ್ಟ ಹೆಸರು ಬಂದಿತ್ತು.

ಒಂದು ವೇಳೆ ಕರ್ನಾಟಕದಲ್ಲಿನ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಬಿದ್ದು ಹೋದರೆ ತನ್ನ ಆಂತರಿಕ ಚಟುವಟಿಕೆಯಿಂದಲೇ ಸರ್ಕಾರ ಪತನವಾಗಿದೆ ಎಂಬುದು ಜನರಿಗೆ ಮನವರಿಕೆಯಾಗುತ್ತದೆ ಎಂಬ ಕಾರಣಕ್ಕಾಗಿಯೇ ಇದುವರೆಗೂ ಯಾವುದೇ ರೀತಿಯ ಬಹಿರಂಗ ಹೇಳಿಕೆಗಳನ್ನು ನೀಡುತ್ತಿಲ್ಲ.

ಅಲ್ಲದೆ ಆಪರೇಷನ್ ಕಮಲದ ಉಸ್ತುವಾರಿಯನ್ನು ಖುದ್ದು ಅಮಿತ್ ಷಾ ಅವರೇ ನಿರ್ವಹಿಸುತ್ತಿರುವುದರಿಂದ ಕರ್ನಾಟಕದ ಯಾವುದೇ ನಾಯಕರಿಗೂ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ.

ಕಳೆದ ಬಾರಿ ಎಲ್ಲ ಮಾಹಿತಿಯು ಸೋರಿಕೆಯಾಗಿದ್ದರಿಂದ ಈ ಬಾರಿ ಅತ್ಯಂತ ನಂಬಿಕಸ್ಥರನ್ನು ಮಾತ್ರ ಆಪರೇಷನ್ ಕಮಲಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸೇರಿದಂತೆ ಕೆಲವೇ ಕೆಲವರು ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಜ್ಯ ನಾಯಕರಿಗೆ ಪಕ್ಷದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳ ಬಗ್ಗೆ ಮಾಹಿತಿ ಇಲ್ಲ.

ಒಂದೆರಡು ದಿನಗಳಲ್ಲಿ ರಮೇಶ್ ಜಾರಕಿಹೊಳಿ ನಿರ್ಧಾರ ಹೊರಬೀಳಲಿದ್ದು, ಸಮ್ಮಿಶ್ರ ಸರ್ಕಾರದ ಅಳಿವು-ಉಳಿವು ಏನೆಂಬುದು ಗೊತ್ತಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ