ನವದೆಹಲಿ, ಮಾ.10- ದೇಶದಲ್ಲಿರುವ ಅಸಮಾನತೆ ಹೋಗಲಾಡಿಸಿ ಸಾಮಾಜಿಕ ನ್ಯಾಯ ಒದಗಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಸಂಸದರು ಮತ್ತು ಶಾಸಕರು ಕಾರ್ಯೋನ್ಮುಖವಾಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಜನ ಪ್ರತಿನಿಧಿಗಳು ಮತ್ತು ಜನರ ಸಹಭಾಗಿತ್ವದಿಂದ ದೇಶದಲ್ಲಿ ಮಹತ್ವದ ಬದಲಾವಣೆ ತರಲು ಸಾಧ್ಯ. ಇದನ್ನು ಅರಿತು ಎಲ್ಲರೂ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ ರಾಷ್ಟ್ರೀಯ ಜನ ಪ್ರತಿನಿಧಿಗಳ ಸಮ್ಮೇಳನ ಉದ್ಘಾಟಸಿ ಅವರು ಮಾತನಾಡಿದರು. ನಮ್ಮ ಸಂವಿಧಾನವು ಇಡೀ ವಿಶ್ವದಲ್ಲೇ ಅತ್ಯುತ್ತಮವಾಗಿದೆ ಎಂದು ಬಣ್ಣಿಸಿದರು.
ನಮ್ಮಲ್ಲಿ ಮಾನವ ಸಂಪನ್ಮೂಲವಿದೆ. ನಮಲ್ಲಿ ಕೌಶಲ್ಯ ಮತ್ತು ವಿಫುಲ ಸಂಪನ್ಮೂಲವಿದೆ. ನಾವು ಅಭಿಯಾನದ ರೀತಿಯಲ್ಲಿ ಕಾರ್ಯನಿರ್ವಹಿಸಿ ಸಕರಾತ್ಮಕ ಬದಲಾವಣೆಗಳನ್ನು ತರಬೇಕು. ಇದರಿಂದ ಸಾಮಾಜಿಕ ನ್ಯಾಯದ ನಮ್ಮ ಗುರಿ ಈಡೇರುತ್ತದೆ ಎಂದು ಮೋದಿ ಹೇಳಿದರು.
ದೇಶದ ಹಲವು ಭಾಗಗಳಲ್ಲಿ ಅಭಿವೃದ್ದಿಯಾಗಿವೆ, ಇನ್ನೂ ಕೆಲವು ಪ್ರದೇಶಗಳು ಹಿಂದುಳಿವೆ. ದೇಶದ ಜಿಲ್ಲೆಗಳ ಒಂದು ಸಮಸ್ಯೆ ನಿವಾರಣೆ ಮತ್ತು ಬದಲಾವಣೆಗಾಗಿ ನಾವು ಕಾಯೋನ್ಮುಖರಾದರೆ, ಇತರ ಕೊರತೆಗಳನ್ನು ನೀಗಿಲು ಉತ್ತೇಜನ ಲಭಿಸುತ್ತದೆ. ಇವುಗಳನ್ನು ಗುರುತಿಸಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ಇದರಲ್ಲಿ ಜನಪ್ರತಿನಿಧಿಗಳೊಂದಿಗೆ ಜನರ ಸಹಭಾಗಿತ್ವವೂ ಸಹ ಅತಿ ಮುಖ್ಯ ಎಂದು ಅವರು ಹೇಳಿದರು.
ಜನಪ್ರತಿನಿಧಿಗಳ ಕೆಲಸ-ಕಾರ್ಯಗಳು ಮತ್ತು ಸಾಧನೆ-ಸೇವೆಗಳ ಬಗ್ಗೆ ಜನರು ನಿಗಾ ಇಟ್ಟಿರುತ್ತಾರೆ. ಇದನ್ನು ಅರಿತು ಶಾಸಕರು ಮತ್ತು ಸಂಸದರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಜನರು ಮತ್ತು ಜನಪ್ರತಿನಿಧಿಗಳು ಕೈಜೋಡಿಸಿದರೆ ಪೂರಕ ಪರಿವರ್ತನೆ ಸಾಧ್ಯ ಎಂದು ಅವರು ತಿಳಿಸಿದರು.
ಸಾರ್ವಜನಿಕರ ಸಹಭಾಗಿತ್ವ ಸದಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಜನರೊಂದಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಲ್ಲಿಲ್ಲೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೋ ಅಲ್ಲಿ ಅತ್ಯುತ್ತಮ ಪ್ರಗತಿಗಳು ಕಂಡು ಬಂದಿವೆ. ಪ್ರಗತಿಪರ ಜಿಲ್ಲೆಗಳ ಕುರಿತು ನಾವು ಒಗ್ಗೂಡಿ ಕೆಲಸ ಮಾಡಿದಾಗ ಅಭಿವೃದ್ದಿ ಸೂಚ್ಯಂಕದಲ್ಲಿ ಭಾರತ ಕ್ರಮಾಂಕದ ಸುಧಾರಣೆಯಾಗುತ್ತದೆ ಎಂದು ಪ್ರಧಾನಿ ಸಲಹೆ ಮಾಡಿದರು.
ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆತಾಗ ಹಾಗೂ ಎಲ್ಲ ಕುಟುಂಬಗಳಿಗೂ ವಿದ್ಯುತ್ ಸೌಲಭ್ಯ ದಕ್ಕಿದಾಗ ಅದು ಸಾಮಾಜಿಕ ನ್ಯಾಯದ ಸೂಚನೆಯಾಗುತ್ತದೆ. ಈ ದಿಕ್ಕಿನಲ್ಲಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯವೂ ಆಗಿದೆ ಎಂದು ಮೋದಿ ಹೇಳಿದರು.
ದೇಶದ ಅಭಿವೃದ್ದಿಯಲ್ಲಿ ಯುವಜನತೆಯ ಪಾತ್ರವೂ ಅತಿ ಮುಖ್ಯವಾದುದು. ಅಭಿವೃದ್ಧಿ ಕಾರ್ಯಗಳಲ್ಲಿ ಯುವ ಜನರನ್ನು ತೊಡಗಿಸಿಕೊಳ್ಳುವ ಅಗತ್ಯವಿದೆ. ಸ್ಪರ್ಧಾತ್ಮಕ ಮನೋಭಾವ ಹಾಗೂ ಪರಸ್ಪರ ಸಹಕಾರ ಧೋರಣೆಯು ದೇಶದ ಅಭಿವೃದ್ದಿಗೆ ನೆರವಾಗುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು, ಶಾಸಕರು, ಹಾಗೂ ಶಾಸನ ಸಭೆಗಳು ಉನ್ನತಾಧಿಕಾರಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಅಭಿವೃದ್ದಿಗಾಗಿ ನಾವು ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಸಂಸತ್, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರಿಗೆ ಸುಸ್ಥಿರ ಅಭಿವೃದ್ದಿ ಗುರಿ ಸಾಧನೆಗೆ ಹಾಗೂ ಪರಸ್ಪರ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಿದೆ.