ಹೈದರಾಬಾದ್: ತೆಲುಗು ಸ್ಟಾರ್ ಮಹೇಶ್ ಬಾಬುಗೆ ಆದಾಯ ತೆರಿಗೆ ಇಲಾಖೆ ಶಾಕ್ ಕೊಟ್ಟಿದ್ದು, ತೆರಿಗೆ ವಂಚನೆ ಆರೋಪದಡಿ ಅವರ ಬ್ಯಾಂಕ್ ಅಕೌಂಟ್ಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.
ಹೈದರಾಬಾದ್ ಜಿಎಸ್ಟಿ ಕಮೀಷನರೇಟ್ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ, ನಟ ಮಹೇಶ್ ಬಾಬು 2007-08ರಲ್ಲಿ ಸೇವಾ ತೆರಿಗೆಯನ್ನು ಪಾವತಿಸಲಿಲ್ಲ. ಅವರು ಬ್ರಾಂಡ್ ಅಂಬಾಸಿಡರ್, ಜಾಹೀರಾತು ಹಾಗೂ ಇತರ ಉತ್ಪನ್ನಗಳ ಪ್ರಚಾರಕ್ಕಾಗಿ ಜಾಹೀರಾತನ್ನು ನೀಡಿದ್ದರು. ಅದರಿಂದ ಬಂದಂತಹ ಹಣಕ್ಕೆ ತೆರಿಗೆ ಕಟ್ಟಿರಲಿಲ್ಲ.
ಮಹೇಶ್ ಬಾಬು ಸುಮಾರು 18.5 ಲಕ್ಷದಷ್ಟು ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ಆದರೆ ಅದಕ್ಕೆ ಬಡ್ಡಿ, ದಂಡ ಸೇರಿ 73.5 ಲಕ್ಷ ಹಣ ಆದಾಯ ಇಲಾಖೆಗೆ ಪಾವತಿಸಬೇಕಿತ್ತು. ಹೀಗಾಗಿ ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಖಾತೆಗಳನ್ನು ತೆರಿಗೆ ಇಲಾಖೆ ವಶಕ್ಕೆ ಪಡೆದು ನೋಟಿಸ್ ನೀಡಿದೆ. ಈ ವಿಷಯದ ಬಗ್ಗೆ ಮಹೇಶ್ ಬಾಬು ಮೇಲ್ಮನವಿ ಪ್ರಾಧಿಕಾರದಿಂದ ಹಿಂಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ನಾವು ಬ್ಯಾಂಕ್ ಖಾತೆಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇಂದು ಆಕ್ಸಿಸ್ ಬ್ಯಾಂಕಿನಿಂದ 42 ಲಕ್ಷ ರೂ.ಗಳನ್ನು ನಾವು ಪಡೆದುಕೊಂಡಿದ್ದೇವೆ. ಐಸಿಐಸಿಐ ಬ್ಯಾಂಕ್ ನಿಂದ ನಾಳೆ ಉಳಿದ ಬ್ಯಾಲೆನ್ಸ್ ಹಣವನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ನಾಳೆ ಪಾವತಿಸದಿದ್ದರೆ ಐಸಿಐಸಿಐ ಬ್ಯಾಂಕ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಬ್ಯಾಂಕ್ ಗೆ ಹಣ ಸೆಟ್ಲ್ ಮಾಡುವವರೆಗೆ ನಟ ತನ್ನ ಖಾತೆಯನ್ನು ಮುಟ್ಟುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.