ಬೆಂಗಳೂರು, ಡಿ.27-ಕಳೆದ ಏಳು ತಿಂಗಳಿಂದ ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಲೇ ಬಂದಿರುವ ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ, ಸರ್ಕಾರಕ್ಕೆ ಏನೂ ಆಗುವುದಿಲ್ಲ. ಸುಭದ್ರವಾಗಿರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ. ಬಿಜೆಪಿಯವರ ಹೇಳಿಕೆಗೆ ಯಾವ ಕಿಮ್ಮತ್ತೂ ಕೊಡಬೇಕಾದ ಅಗತ್ಯವಿಲ್ಲ. ಶಾಸಕ ಉಮೆಶ್ ಕತ್ತಿ ಹೇಳಿಕೆಯಿಂದ ಸರ್ಕಾರಕ್ಕೆ ಧಕ್ಕೆ ಇಲ್ಲ ಎಂದು ಹೇಳಿದರು.
ನನ್ನ ಮತ್ತು ಪರಮೇಶ್ವರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಯಾರನ್ನೂ ಯಾವುದೇ ಖಾತೆ ಬಿಟ್ಟುಕೊಡಿ ಎಂದು ಒತ್ತಾಯ ಮಾಡಿಲ್ಲ. ನಮ್ಮ ಅಭಿಪ್ರಾಯವನ್ನು ಪಕ್ಷದ ಉಸ್ತುವಾರಿಯಾದ ವೇಣುಗೋಪಾಲ್ ಅವರಿಗೆ ತಿಳಿಸಿದ್ದೇವೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಅವರು ಬೇಸರಗೊಂಡಿದ್ದಾರೆ. ನಾನು ಅವರೊಂದಿಗೆ ಮಾತನಾಡುತ್ತೇನೆ. ಸದ್ಯ ಅವರು ನಮ್ಮ ಸಂಪರ್ಕದಲ್ಲಿಲ್ಲ. ಆದರೆ, ಅವರು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ಅವರು ಪಕ್ಕಾ ಕಾಂಗ್ರೆಸಿಗರು. ಪಕ್ಷದಲ್ಲೇ ಇರುತ್ತಾರೆ. ಅನಿವಾರ್ಯವಾಗಿ ನಾವು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಲೋಕಸಭೆ ಚುನಾವಣೆಗೆ ಜೆಡಿಎಸ್ ಜತೆ ಮೈತ್ರಿ ಮುಂದುವರಿಯುತ್ತದೆ. ಎಷ್ಟು ಸೀಟು ಹಂಚಿಕೆ ಮಾಡಿಕೊಳ್ಳುತ್ತೇವೆ ಎಂಬ ಬಗ್ಗೆ ಇನ್ನೂ ಯಾವುದೇ ಚರ್ಚೆಯಾಗಿಲ್ಲ ಎಂದು ತಿಳಿಸಿದರು.