ಬೆಂಗಳೂರು, ಡಿ.27- ನಾವು 101 ಜನ ಸದಸ್ಯರಿದ್ದರೂ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಆದರೆ, ನೀವು 70 ಸದಸ್ಯರಿದ್ದು, ಪಕ್ಷೇತರರೊಂದಿಗೆ ಕೈ ಜೋಡಿಸಿ ಅಧಿಕಾರ ಹಿಡಿದು ಮಾಡಬಾರದ ಅದ್ವಾನ ಮಾಡುತ್ತಿದ್ದೀರಿ. ನಿಮಗೆ ಆಯುಕ್ತರು ಕೈ ಜೋಡಿಸುತ್ತಿದ್ದಾರೆ. ಮಹಾಭಾರತದಲ್ಲಿ ಪಾಂಡವರಿಗೆ ಕೃಷ್ಣ ಕೈ ಹಿಡಿದಂತೆ ನಿಮ್ಮನ್ನು ಕೈ ಹಿಡಿದಿದ್ದಾರೆ ಎಂದು ಪದ್ಮನಾಭರೆಡ್ಡಿ ಲೇವಡಿ ಮಾಡಿದರು.
ಪಾಲಿಕೆ ಸಭೆಯಲ್ಲಿಂದು ಮಾತನಾಡಿದ ಅವರು, ಬಹುಮತದ ಸಮೀಪವಿದ್ದರೂ ಅಧಿಕಾರ ಹಿಡಿಯಲು ಆಗಲಿಲ್ಲ. ಆದರೆ, ನೀವು ಪಕ್ಷೇತರರು, ಜೆಡಿಎಸ್ನವರ ಜತೆ ಕೈ ಜೋಡಿಸಿಕೊಂಡು ಅಧಿಕಾರ ಹಿಡಿದು ಅದ್ವಾನ ಮಾಡಿದ್ದೀರಿ. ಇದಕ್ಕೆ ಅಧಿಕಾರಿಗಳು ಜೈ ಜೋಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಬಿಬಿಎಂಪಿಯಲ್ಲಿ ಶೇ.48.7ರಷ್ಟು ಸಾಧನೆ ಮಾಡಿರುವುದಾಗಿ ಹೇಳಿರುವ ನೀವು ಇನ್ನೊಂದು ತಿಂಗಳಲ್ಲಿ ಶೇ.52ರಷ್ಟು ಏನು ಸಾಧನೆ ಮಾಡುತ್ತೀರ? ನಾನು ನನ್ನ ಆರೋಪಕ್ಕೆ ಈಗಲೂ ಬದ್ಧನಾಗಿದ್ದೇನೆ ಎಂದು ಆರೋಪಿಸಿದರು. ನಾನು ಕೇಳಿರುವ 53 ಪ್ರಶ್ನೆಗಳಿಗೆ ಆಯುಕ್ತರಿಂದ ಉತ್ತರ ಕೊಡಿಸಬೇಕು ಎಂದು ಆಗ್ರಹಿಸಿದರು.
ನಾಲ್ಕು ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಕೆಲಸ ಆಗಿರುವುದು ಸಂತೊಷದ ವಿಷಯ. ಬಜೆಟ್ನಲ್ಲಿ ಘೋಷಣೆ ಮಾಡಿರುವಂತೆ ಖರ್ಚು ಮಾಡಲಾಗಿದೆಯೇ? 20 ತಿಂಗಳ ಪೆಂಡಿಂಗ್ ಬಿಲ್ ಬಾಕಿ ಇದೆ. ಬಜೆಟ್ನ ಎಲ್ಲ ಘೋಷಣೆಗೂ ಟೆಂಡರ್ ಕರೆದಿದ್ದೀರಾ. ಕೇಂದ್ರ ಸರ್ಕಾರ ನೂರು ಕೋಟಿ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ಪಾಲಿಕೆ ಕಟ್ಟಡದ ಮೇಲೆ ಸಾಲ ಮಾಡಿರುವುದು ನಾವಲ್ಲ, ಐಎಎಸ್ ಅಧಿಕಾರಿಗಳು. ಈ ಬಗ್ಗೆ ಶ್ವೇತಪತ್ರಕ್ಕೆ ಆಗ್ರಹಿಸಿದರೂ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು.