ಬೆಂಗಳೂರು, ಡಿ.27-ನಗರದಲ್ಲಿ ಹೊಸ ವರ್ಷ ಆಚರಣೆಗೆ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಿದ್ದು, ಒಟ್ಟು 15ಸಾವಿರ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಐದು ಮಂದಿ ಐಜಿಪಿ ಮತ್ತು ಅಪರ ಪೊಲೀಸ್ ಆಯುಕ್ತರು, ಒಬ್ಬರು ಐಜಿಪಿ ಮತ್ತು ಜಂಟಿ ಪೊಲೀಸ್ ಆಯುಕ್ತರು, 15 ಮಂದಿ ಉಪ ಪೊಲೀಸ್ ಆಯುಕ್ತರು, 45 ಸಹಾಯಕ ಪೊಲೀಸ್ ಆಯುಕ್ತರು, 220 ಇನ್ಸ್ಪೆಕ್ಟರ್ಗಳು, 430 ಸಬ್ಇನ್ಸ್ಪೆಕ್ಟರ್ಗಳು, 800 ಮಂದಿ ಸಹಾಯಕ ಪೊಲೀಸ್ ಸಬ್ಇನ್ಸ್ಪೆಕ್ಟರ್, 10ಸಾವಿರ ಹೆಡ್ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇಬಲ್, 1500 ಹೋಮ್ಗಾಡ್ಸ್, 1000 ಸಿವಿಲ್ ಡಿಫೆನ್ಸ್, ಒಂದು ತುಕಡಿ ಗರುಡಾ ಪೊರ್ಸ್, ಎರಡು ತುಕಡಿ ಕ್ಯೂಆರ್ಟಿ, ಎರಡು ವಾಟರ್ ಜೆಟ್, 50 ಕೆಎಸ್ಆರ್ಪಿ ತುಕಡಿಗಳು ಹಾಗೂ 30 ಸಿಎಆರ್ ತುಕಡಿಗಳು ಕರ್ತವ್ಯದಲ್ಲಿರುತ್ತವೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಹರಿಶೇಖರನ್, ಅಂದು ಎರಡು ಸಾವಿರ ಸಂಚಾರಿ ಪೊಲೀಸರು ಸಂಚಾರಿ ನಿರ್ವಹಣೆ ಮಾಡಲಿದ್ದಾರೆ. ಜಿಗ್ಜಾಗ್ ಕ್ರಾಸಿಂಗ್ ನಿರ್ಬಂಧಿಸಲು ಬ್ಯಾರಿಕೇಡ್ ಹಾಕಲಾಗುತ್ತದೆ. ವೀಲ್ಹಿಂಗ್ ಮಾಡುವವರ ವಿರುದ್ಧ ಹಾಗೂ ಬೈಕ್ಗಳಲ್ಲಿ ಕರ್ಕಷ ಶಬ್ಧ ಮಾಡುವ ಹಾರನ್ ಬಳಕೆ ಮಾಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೀಕಿ ಡ್ಯಾನ್ಸ್ಗೆ ಆಸ್ಪದವಿಲ್ಲ. ಒಂದು ವೇಳೆ ಕಾರು ಚಾಲನೆಯಾಗುತ್ತಾ ಪಕ್ಕದಲ್ಲಿ ಡ್ಯಾನ್ಸ್ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಕುಡಿದು ವಾಹನ ಚಾಲನೆ ಮಾಡುವ ನೂರು ಸ್ಥಳಗಳನ್ನು ಗುರುತಿಸಿದ್ದು, ಡಿ.31ರ ರಾತ್ರಿ 8 ಗಂಟೆಯಿಂದಲೇ ಈ ಪಾಯಿಂಟ್ಗಳಲ್ಲಿ ಪೊಲೀಸರು ಕರ್ತವ್ಯದಲ್ಲಿರುತ್ತಾರೆ ಎಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ಕುಮಾರ್ ಮಾತನಾಡಿ, ಕಳೆದ ವರ್ಷ ಯುವಕ-ಯುವತಿಯರ ನಡುವೆ ನಡೆದಿದ್ದ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಘಟನೆ ಮರುಕಳಿಸದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.
ಬಾರ್ ಹಾಗೂ ಪಬ್ಗಳ ಮಾಲೀಕರು ಅವರವರ ಸ್ಥಳಗಳಲ್ಲಿ ಹೆಣ್ಣುಮಕ್ಕಳಿಗಾಗಿ ವಿಶೇಷ ರಕ್ಷಣಾ ವ್ಯವಸ್ಥೆ ಒದಗಿಸಬೇಕು, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದ್ಯ ಸರಬರಾಜು ಮಾಡಬಾರದು, ಪಬ್ಗಳ ಒಳಗೆ ಹಾಗೂ ಅವುಗಳ ಮುಂದೆ ಆಗುವ ಗಲಭೆಗಳಿಗೆ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರಲ್ಲದೆ, ರೇವಾ ಪಾರ್ಟಿ ಮಾಡಲು ಅನುಮತಿ ಇಲ್ಲ ಎಂದು ತಿಳಿಸಿದರು.
ಮಧ್ಯರಾತ್ರಿ 12ಗಂಟೆಗೆ ಬಾಟಲ್ಗಳನ್ನು ಬಾರ್ ಮುಂದೆ ಒಡೆಯದಂತೆ ಮಾಲೀಕರೇ ನೋಡಿಕೊಳ್ಳಬೇಕು. ಅಬಕಾರಿ ಇಲಾಖೆಯಿಂದ ವಿಶೇಷ ತಂಡಗಳನ್ನು ರಚಿಸಿ ಅನಧಿಕೃತ ಮದ್ಯ ಮಾರಾಟದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಅಂದು ರಾತ್ರಿ 2 ಗಂಟೆವರೆಗೂ ಮೆಟ್ರೋ ಸಂಚಾರವಿದ್ದು, ಹೆಣ್ಣು ಮಕ್ಕಳ ರಕ್ಷಣೆಗೆ ವಿಶೇಷ ಪೊಲೀಸ್ ಸ್ಕ್ವಾಡ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಅಲೋಕ್ಕುಮಾರ್ ಮಾತನಾಡಿ, ಡಿ.31ರಂದು ರಾತ್ರಿ ಎಲ್ಲಾ ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿಗಳು ವಿಶೇಷ ಕರ್ತವ್ಯದಲ್ಲಿರುತ್ತಾರೆ. ಕುಡಿದು ಗಲಾಟೆ, ದಾಂಧಲೆ ಮಾಡುವ ರೌಡಿಗಳ ಮೇಲೆ ನಿಗಾವಹಿಸಲಾಗುತ್ತದೆ. ಡ್ರಗ್ಸ್ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ರೌಡಿಗಳ ಪಟ್ಟಿ ಪರಿಶೀಲನೆ ಮಾಡಿ ನಮ್ಮ ಸಿಬ್ಬಂದಿ ಅವರ ಮೇಲೆ ನಿಗಾ ಇಟ್ಟಿದೆ ಎಂದರು.
ಅಪರಾಧ ಮತ್ತು ಯಾವುದೇ ಕಾನೂನು ಬಾಹೀರ ಚಟುವಟಿಕೆ ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಗಲಾಟೆ ನಿಯಂತ್ರಣಕ್ಕಾಗಿ ಸಿಸಿ ಟಿವಿ ಕ್ಯಾಮೆರಾ ಹಾಗೂ ಎಲ್ಇಡಿ ಪರದೆಗಳನ್ನು ಅಳವಡಿಸಲಾಗುವುದು. ಜನರ ಚಲನವಲನಗಳ ಮೇಲೆ ನಿಗಾ ಇಡಲು ಡ್ರೋಣ್ಗಳ ಬಳಕೆ ಮಾಡಲಾಗುವುದು ಎಂದರು.