ಬೆಂಗಳೂರು, ಫೆ.12-ಸಾರ್ವಜನಿಕರ ಗಮನ ಬೇರೆಡೆ ಸೆಳೆದು ದರೋಡೆ ಮಾಡುತ್ತಿದ್ದ ಕುಖ್ಯಾತ ರಾಮ್ಜೀ ಗ್ಯಾಂಗ್ನ ಐದು ಮಂದಿ ದರೋಡೆಕೋರರನ್ನು ಜಯನಗರ ಪೋಲೀಸರು ಬಂಧಿಸಿ 3.60 ಲಕ್ಷ ರೂ. ನಗದು, 24 ಗ್ರಾಂ ಚಿನ್ನದ ಆಭರಣ ಸೇರಿದಂತೆ 5 ಲಕ್ಷ ರೂ. ಮೌಲ್ಯದ ವಿವಿಧ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಗ್ಯಾಂಗ್ನ ಮಾಸ್ಟರ್ಮೈಂಡ್ ಸತ್ಯನಾರಾಯಣ (44), ರವಿಕುಮಾರ್ (40), ಮುರಳಿ (30), ಶಿವವೆಂಕಟೇಶ್ (45) ಮತ್ತು ವೆಂಕಟೇಶ್ (48) ಬಂಧಿತ ಆರೋಪಿಗಳು.
ಆರೋಪಿಗಳ ಬಂಧನದಿಂದ 10 ಪ್ರಕರಣಗಳು ಪತ್ತೆಯಾಗಿದ್ದು, 3.60 ಲಕ್ಷ ರೂ. ನಗದು, 24 ಗ್ರಾಂ ಚಿನ್ನಾಭರಣಗಳು, ಒಂದು ಲ್ಯಾಪ್ಟಾಪ್ ಸೇರಿದಂತೆ ಒಟ್ಟು 5 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಇವರೆಲ್ಲರೂ ಕುಖ್ಯಾತ ದರೋಡೆಕೋರ ರಾಮ್ಜೀ ಗ್ಯಾಂಗ್ನ ಸಹಚರರಾಗಿದ್ದು, ಇವರು ಸಾರ್ವಜನಿಕರ ಗಮನ ಸೆಳೆಯಲು ನೋಟನ್ನು ನೆಲದ ಮೇಲೆ ಬೀಳಿಸುವುದು, ಬಟ್ಟೆ ಮೇಲೆ ಗಲೀಜು ಬಿದ್ದಿದೆ ಎಂದು ಹೇಳುವುದು, ಆಯಿಲ್ ಲೀಕ್ ಆಗಿದೆ ಎಂದು, ಟಯರ್ ಪಂಕ್ಚರ್ ಆಗಿದೆ ಎಂದು ಅಲ್ಲದೆ, ಚುರುಕಿ ಪುಡಿ ಹಾಕಿ ಅವರ ಗಮನ ಸೆಳೆದು ಹಣ, ಆಭರಣವನ್ನು ದರೋಡೆ ಮಾಡುವ ಚಾಳಿ ಹೊಂದಿದ್ದಾರೆ.
ಪ್ರಮುಖವಾಗಿ ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡು ಬರುವವರು, ಕಾರು ಅಥವಾ ಬೈಕ್ಗಳಲ್ಲಿ ಒಂಟಿಯಾಗಿ ಸಂಚರಿಸುವಾಗ, ಲ್ಯಾಪ್ಟಾಪ್ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚುವುದು, ಜ್ಯುವೆಲರಿ ಅಂಗಡಿಗಳಿಂದ ಚಿನ್ನ ಖರೀದಿಸಿ ಹೊರಗೆ ಬರುವವರನ್ನು ಗುರಿಯಾಗಿಟ್ಟುಕೊಂಡು ಅವರ ಗಮನ ಸೆಳೆದು ದರೋಡೆ ಮಾಡುತ್ತಿದ್ದರು.
ಈ ಬಗ್ಗೆ ಜಯನಗರ ಉಪವಿಭಾಗದ ಅಪರಾಧ ದಳದವರು ತನಿಖೆ ಕೈಗೊಂಡು ವಿವಿಧ ಮಾಹಿತಿಗಳನ್ನು ಕಲೆಹಾಕಿ ಕೋಲಾರ ಮೂಲದ ಮಾಸ್ಟರ್ ಮೈಂಡ್ ಸತ್ಯನಾರಾಯಣ ಹಾಗೂ ವೆಸ್ಟ್ ಬೆಂಗಾಲ್ನ ರವಿಕುಮಾರ್, ತಿರುಚಿಯ ಮುರಳಿ ಹಾಗೂ ಕೋಲಾರ ಮೂಲದ ಶಿವವೆಂಕಟೇಶ್ ಹಾಗೂ ವೆಂಕಟೇಶ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ದೊಡ್ಡ ಮಾಲ್ಗಳು, ಕಾಂಪ್ಲೆಕ್ಸ್ಗಳು ಹಾಗೂ ಜನಸಂದಣಿ ಹೆಚ್ಚಾಗಿರುವ ಸ್ಥಳಗಳಲ್ಲಿ 10 ರೂ. ನೋಟನ್ನು ರಸ್ತೆಯಲ್ಲಿ ಬಿಸಾಡಿ ನಿಮ್ಮ ಹಣ ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದು ಅವರ ಬೆಲೆಬಾಳುವ ವಸ್ತುಗಳನ್ನು ಹಾಗೂ ನಗದನ್ನು ದೋಚುತ್ತಿದ್ದರು.
ಈ ದೃಶ್ಯಾವಳಿಗಳು ಕೃತ್ಯ ನಡೆದ ಸ್ಥಳದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಆರೋಪಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಕುಖ್ಯಾತ ಗ್ಯಾಂಗ್ನ್ನು ಸೆರೆಹಿಡಿಯುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.
ಮುನ್ನೆಚ್ಚರಿಕಾ ಕ್ರಮಗಳು:
ಬ್ಯಾಂಕ್ನಿಂದ ಹಣವನ್ನು ಡ್ರಾ ಮಾಡಿಕೊಂಡು ಹಿಂದಿರುಗುವಾಗ ಜಾಗರೂಕರಾಗಿರಬೇಕು.
ಕಾರಿನೊಳಗೆ ಯಾವುದೇ ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ಇಡಬಾರದು.
ಅಪರಿಚಿತರು ನೋಟು ಬಿದ್ದಿದೆ, ಗಲೀಜು ಬಿದ್ದಿದೆ, ಪಂಕ್ಚರ್ ಆಗಿದೆ ಇನ್ನಿತರೆ ರೀತಿಯಲ್ಲಿ ಹೇಳಿದ್ದಲ್ಲಿ ನಂಬಿ ಮೋಸ ಹೋಗಬಾರದು.
ಅಪರಿಚಿತರು ಬಂದು ನಿಮ್ಮ ಹಣ ನೆಲದ ಮೇಲೆ ಬಿದ್ದಿದೆ ಎಂದು ಹೇಳಿದ್ದಲ್ಲಿ ಅದನ್ನು ನಂಬಿ ತೆಗೆದುಕೊಳ್ಳಲು ಹೋಗಬಾರದು.
ಫೋಟೋ ಕ್ರೆಡಿಟ್: thehindu.com