ಓಡಾಡುವ ಆಸ್ಪತ್ರೆ ಎಂದು ಖ್ಯಾತಿ ಹೊಂದಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಸೂಲಗಿತ್ತಿ ನರ್ಸಮ್ಮ ವಿಧಿವಶ

ತುಮಕೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಸೂಲಗಿತ್ತಿ ನರ್ಸಮ್ಮ ಅವರಿಂದು ವಿಧಿವಶರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನರಸಮ್ಮ ಅವರಿಗೆ ಉಸಿರಾಟದ ತೊಂದರೆಯಿತ್ತು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ನರಸಮ್ಮ ಇಂದು ಕೊನೆಯುಸಿರೆಳೆದಿದ್ದಾರೆ.

ಯಾವುದೇ ವೈದ್ಯಕೀಯ ಸಹಾಯವಿಲ್ಲದೆ ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ನರಸಮ್ಮ ಕಳೆದ 25 ದಿನಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆ, ವಯೋಸಹಜ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.

ನಿನ್ನೆ ರಾತ್ರಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 3 ಗಂಟೆಗೆ ನರಸಮ್ಮ ಅವರು ನಿಧನ ಹೊಂದಿದ್ದಾರೆ.

ಪಾವಗಡ ತಾಲೂಕಿನ ನರಸಮ್ಮ ಆಂಜಿನಪ್ಪ ಈ ಭಾಗದಲ್ಲಿ ‘ನರ್ಸಮ್ಮ’ ಎಂದೇ ಚಿರಪರಿಚಿತರಾಗಿದ್ದರು. 7 ದಶಕಗಳಿಂದ 1,500 ಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಸೂಲಗಿತ್ತಿ ನರಸಮ್ಮಗೆ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ಕೂಡ ಲಭಿಸಿದೆ. ಪಾವಗಡ ತಾಲೂಕಿನ ಪುಟ್ಟ ಗ್ರಾಮ ಕೃಷ್ಣಾಪುರದ ನರಸಮ್ಮ, 12ನೇ ವಯಸ್ಸಿನಲ್ಲೇ ಆಂಜಿನಪ್ಪರನ್ನು ಮದುವೆಯಾಗಿದ್ದರು. 8 ಗಂಡು ಮಕ್ಕಳು, 4 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಇವರು ತನ್ನ ಬದುಕಿನದ್ದುಕ್ಕೂ ಹೆರಿಗೆ ಮಾಡಿಸುವ ಮೂಲಕ ‘ನರಸಮ್ಮ ಖ್ಯಾತರಾಗಿದ್ದರು.

Sulagitti Narasamma,Death

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ