ಬೆಂಗಳೂರು, ಡಿ.24- ಕಾಂಗ್ರೆಸ್ ಹಿರಿಯ ಮುಖಂಡ, ಶಾಸಕ ರಾಮಲಿಂಗಾರೆಡ್ಡಿ ಅವರು ಸುಮಾರು 40 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ಮುಂಚೂಣಿಯಲ್ಲಿದ್ದು, ಸತತವಾಗಿ 7 ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಸಕ್ರಿಯವಾಗಿ ರಾಜಕಾರಣದಲ್ಲಿ ಇರುವ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡಬೇಕು ಎಂದು ರೆಡ್ಡಿ ಸಮುದಾಯ ಕಾಂಗ್ರೆಸ್ ಹೈಕಮಾಂಡನ್ನು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಮುನಿವೆಂಕಟರೆಡ್ಡಿ, ರಾಮಲಿಂಗಾರೆಡ್ಡಿ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಟಿಎಂಲೇಔಟ್ ವಿಧಾನಸಭಾ ಕ್ಷೇತ್ರದಿಂದ 7ನೇ ಬಾರಿಗೆ ಅತೀ ಹೆಚ್ಚು ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ. ಅಲ್ಲದೆ ಆನೇಕಲ್, ಜಯನಗರ ವಿಧಾನ ಸಭಾ ಕ್ಷೇತ್ರಗಳು ಸೇರಿದಂತೆ ಬೆಂಗಳೂರು ನಗರದ ಕಾಂಗ್ರೆಸ್ ಪಕ್ಷದ ಹೆಚ್ಚು ಅಭ್ಯರ್ಥಿಗಳ ಗೆಲುವಿಗೆ ಕಾರಣ ಕರ್ತರಾಗಿದ್ದಾರೆ ಎಂದರು.
ಸುದೀರ್ಘ ರಾಜಕೀಯ ಜೀವನದಲ್ಲಿ ರಾಮಲಿಂಗಾರೆಡ್ಡಿ ಅವರು ಸಣ್ಣ ಕೈಗಾರಿಕೆ, ಕೃಷಿ ಉತ್ಪನ್ನ ಮಾರಾಟ ಖಾತೆ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ, ಶಿಕ್ಷಣ, ಸಾರಿಗೆ ಹಾಗೂ ಗೃಹ ಸಚಿವರಾಗಿ ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.ಯಾವುದೇ ವಿವಾದಗಳಿಗೆ ಅವಕಾಶ ಕೊಡದೆ ಅತ್ಯಂತ ಸಮರ್ಥ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಅವರ ಕಾರ್ಯತತ್ಪರತೆ, ಪಕ್ಷನಿಷ್ಠೆ, ಅಪಾರವಾದ ಜನಪರ ಕಾಳಜಿ, ಜನಪ್ರಿಯತೆ ಹಾಗೂ ತಮ್ಮ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿರುವ ಇವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಸರಳ, ಸಜ್ಜನಿಕೆಯ ಹಿರಿಯ ರಾಜಕಾರಣಿಯಾದ ರಾಮಲಿಂಗಾ ರೆಡ್ಡಿಯವರಿಗೆ ಸಚಿವ ಸ್ಥಾನ ಕೈ ತಪ್ಪಿರುವುದು ರಾಜ್ಯದಲ್ಲಿರುವ 50 ಲಕ್ಷ ರೆಡ್ಡಿ ಸಮುದಾಯಕ್ಕೆ ಅಘಾತವನ್ನು ಉಂಟುಮಾಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯಗಳಿಸುವ ದೃಷ್ಟಿಯಿಂದ ರಾಮಲಿಂಗಾರೆಡ್ಡಿಯವರಿಗೆ ಸಚಿವ ಸ್ಥಾನ ನೀಡುವುದು ಅನಿವಾರ್ಯ.ಕೂಡಲೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ರಾಜ್ಯದ ರೆಡ್ಡಿ ಸಮುದಾಯದ ಪರವಾಗಿ ಕರ್ನಾಟಕ ರೆಡ್ಡಿ ಜನ ಸಂಘ ಒತ್ತಾಯಿಸುತ್ತಿದೆ ಎಂದು ಅವರು ತಿಳಿಸಿದರು.
ಬಿಬಿಎಂಪಿ ಸದಸ್ಯ ಉದಯಕುಮಾರ್ ರೆಡ್ಡಿ, ಮಾಜಿ ಮೇಯರ್ ಮಂಜುನಾಥ ರೆಡ್ಡಿ, ಚಂದ್ರಪ್ಪರೆಡ್ಡಿ, ಅಭಿಲಾಶ್ ರೆಡ್ಡಿ, ಕರ್ನಾಟಕ ರೆಡ್ಡಿಜನ ಸಂಘದ ಅಧ್ಯಕ್ಷ ವಿಜಯ ರಾಘವರೆಡ್ಡಿ, ಉಪಾಧ್ಯಕ್ಷ ಮುನಿವೆಂಕಟಪ್ಪ, ಡಿ.ಎನ್.ಲಕ್ಷ್ಮಣ ರೆಡ್ಡಿ, ಪ್ರಬಾರ ಕಾರ್ಯದರ್ಶಿ ಎನ್.ಶೇಖರ್ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.