ಬೆಂಗಳೂರು, ಡಿ.24- ಸ್ಪೀಡ್ ಗವರ್ನರ್ ಅಳವಡಿಕೆ, ವಾಹನಗಳ ಶುಲ್ಕ ಕಡಿಮೆ, ನಗರದ ಹೊರವಲಯದಲ್ಲಿ ಆರ್ಟಿಒಗಳ ಕಚೇರಿ ಸ್ಥಾಪನೆ ಸೇರಿದಂತೆ ಹಲವು ಉತ್ತಮ ಕೆಲಸಗಳನ್ನು ಸಚಿವರಾಗಿದ್ದ ಸಂದರ್ಭದಲ್ಲಿ ಮಾಡಿದ್ದ ರಾಮಲಿಂಗಾರೆಡ್ಡಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿ ಲಾರಿ ಮಾಲೀಕರು ಮತ್ತು ಚಾಲಕರ ಏಜೆಂಟ್ಸ್ ಒಕ್ಕೂಟದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಈ ಕುರಿತು ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ರಾಮಲಿಂಗಾರೆಡ್ಡಿ ಅವರು ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಲಾರಿ ಮಾಲೀಕರು, ಚಾಲಕರು, ಕಾರ್ಮಿಕರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಿದ್ದಾರೆ.ಲಾರಿ ಮಾಲೀಕರಿಗೆ ಸಾಕಷ್ಟು ತೆರಿಗೆ ವಿಧಿಸಿದ ಸಂದರ್ಭದಲ್ಲಿ ಅವುಗಳನ್ನು ಕೇಂದ್ರ ಸರ್ಕಾರದಿಂದ ಕಡಿಮೆ ಮಾಡಿಸಿಕೊಟ್ಟು ಅನುಕೂಲ ಮಾಡಿಕೊಟ್ಟಿದ್ದಾರೆ.ಅವರು ಸರ್ಕಾರದಲ್ಲಿದ್ದರೆ ನಮಗೆ ಮತ್ತಷ್ಟು ಅನುಕೂಲವಾಗುತ್ತದೆ. ಹಾಗಾಗಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ನಾವು ಯಾವುದೇ ರಾಜಕೀಯ ಪಕ್ಷದವರಲ್ಲ, ಆದರೆ ನಮ್ಮ ಪರವಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರನ್ನು ಬೆಂಬಲಿಸುತ್ತಿದ್ದೇವೆ. ಲಕ್ಷಾಂತರ ಜನ ಲಾರಿ ಚಾಲಕರು, ಕಾರ್ಮಿಕರಿದ್ದಾರೆ. ಅವರಿಗೆ ಅನುಕೂಲವಾಗುವಂತಹ ಕೆಲಸ ಮಾಡಿರುವುದರಿಂದ ರಾಜಕೀಯೇತರ ಸಂಘಟನೆಯಾದ ನಾವು ರಾಮಲಿಂಗಾರೆಡ್ಡಿ ಅವರು ಸಚಿವರಾಗಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಚಾಲಕರು ವಾಹನ ಪರವಾನಗಿ ಪಡೆಯಲು ಕನಿಷ್ಟ 8ನೆ ತರಗತಿ ವಿದ್ಯಾರ್ಹತೆ ಹೊಂದಿರಬೇಕು ಎಂಬ ನಿಯಮ ತಂದಾಗ ಆ ನಿಯಮ ಸಡಿಲಗೊಳಿಸಿ ಚಾಲಕರಿಗೆ ಅನುಕೂಲ ಮಾಡಿಕೊಟ್ಟಿದ್ದರು.2 ಲಕ್ಷ ರೂ.ವಿಮೆ ಪಾವತಿಸಬೇಕು ಎಂಬ ನಿಯಮ ಬಂದಾಗಲೂ ಕೂಡ ನಮ್ಮ ಪರವಾಗಿ ಅವರು ನಿಂತಿದ್ದರು. ಹೀಗಾಗಿ ನಾವು ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ಹೇಳಿದರು.